elephant 
ಸುದ್ದಿಗಳು

ಕೇರಳದಲ್ಲಿ ಕಳೆದ ಎಂಟು ವರ್ಷಗಳಲ್ಲಿ 845 ಆನೆ ಸಾವು: ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ ಎನ್‌ಜಿಟಿ

Bar & Bench

ಕಳೆದ 8 ವರ್ಷಗಳಲ್ಲಿ ಕೇರಳದಲ್ಲಿ 845 ಆನೆಗಳು ಸಾವನ್ನಪ್ಪಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಆರಂಭಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಸಂಬಂಧ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಕೇರಳ ಅರಣ್ಯ ಇಲಾಖೆಗೆ ನೋಟಿಸ್ ನೀಡಿದೆ.

ಈ ವಿಚಾರ ಪರಿಸರದ ಮಾನದಂಡಗಳ ಅದರಲ್ಲಿಯೂ 1986 ರ ಪರಿಸರ ಸಂರಕ್ಷಣಾ ಕಾಯಿದೆ ಮತ್ತು ಜೀವ ವೈವಿಧ್ಯ ಕಾಯಿದೆಯ ಪಾಲನೆಗೆ ಸಂಬಂಧಿಸಿದೆ ಎಂದು ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ , ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ  ಅರುಣ್ ಕುಮಾರ್ ತ್ಯಾಗಿ  ಹಾಗೂ ಪರಿಣತ ಸದಸ್ಯ ಡಾ.  ಎ ಸೆಂಥಿಲ್ ವೇಲ್ ಅವರಿದ್ದ ಪೀಠ ತಿಳಿಸಿದೆ.

'ಕೇರಳದಲ್ಲಿ ಎಂಟು ವರ್ಷಗಳಲ್ಲಿ 845 ಆನೆಗಳ ಸಾವು ದಾಖಲಾಗಿದೆ' ಎಂಬ ʼದಿ ಹಿಂದೂʼ ಪತ್ರಿಕೆಯ ವರದಿ ಆಧರಿಸಿ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ಲೇಖನದ ಪ್ರಕಾರ, 2015 ಮತ್ತು 2023ರ ನಡುವೆ, ಕೇರಳದ ಕಾಡುಗಳಲ್ಲಿ 845 ಆನೆಗಳ ಸಾವು ದಾಖಲಾಗಿದ್ದು ಮರಣ ಪ್ರಮಾಣ ಹೆಚ್ಚಿರುವುದನ್ನು ಅದರಲ್ಲಿಯೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆನೆಗಳು ಹೆಚ್ಚು ಸಾವನ್ನಪ್ಪುತ್ತಿರುವುದನ್ನು ಅಧ್ಯಯನಗಳು ಸೂಚಿಸುತ್ತವೆ. ಸುಮಾರು 40%ರಷ್ಟು ಈ ಎಳೆಯ ಆನೆಗಳು ಎಲಿಫೆಂಟ್ ಎಂಡೋಥೆಲಿಯೋಟ್ರೋಪಿಕ್ ಹರ್ಪಿಸ್ವೈರಸ್-ಹೆಮರಾಜಿಕ್ ಡಿಸೀಸ್ (EEHV-HD) ಗೆ ಬಲಿಯಾಗುತ್ತಿವೆ ಎಂದು ವರದಿ ತಿಳಿಸಿದೆ.

ರೋಗನಿರೋಧಕ ಶಕ್ತಿ ವರ್ಧಿಸುವ ದೊಡ್ಡ ಹಿಂಡುಗಳಲ್ಲಿನ ಆನೆಮರಿಗಳಿಗೆ ಇಇಎಚ್‌ವಿ- ಎಚ್‌ಡಿ ಕಾಯಿಲೆ ತಗುಲದೆ ಅವು ಬದುಕುಳಿಯುವ ಪ್ರಮಾಣ ಉತ್ತಮ ರೀತಿಯಲ್ಲಿರುತ್ತದೆ. ದೊಡ್ಡ ಹಿಂಡುಗಳು ರೋಗದ ಪರಿಣಾಮ ತಗ್ಗಿಸಲು ಸಹಾಯ ಮಾಡುತ್ತವೆ.

ಆನೆಗಳ ಆವಾಸ ಸ್ಥಾನ ಕುಗ್ಗಿರುವುದು, ವಿಘಟನೆ, ಹವಾಮಾನ ಬದಲಾವಣೆ ಹಾಗೂ ಆಕ್ರಮಣಕಾರಿ ಸಸ್ಯ ಪ್ರಭೇದಗಳ ಪೈಪೋಟಿಯ ಸಮಸ್ಯೆ ಆನೆಗಳಿಗೆ ಎದುರಾಗಿದೆ ಎಂದು ವರದಿ ವಿವರಿಸಿದೆ.

ಆನೆಗಳ ಸಾವಿನ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಲು ತಮಿಳುನಾಡಿನ ಎಲಿಫೆಂಟ್ ಡೆತ್ ಆಡಿಟ್ ಫ್ರೇಮ್‌ವರ್ಕ್ (EDAF) ಮಾದರಿಯಲ್ಲೇ ಕೇರಳ ಕೂಡ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧ್ಯಯನ ಶಿಫಾರಸು ಮಾಡಿದೆ.

ಇವುಗಳ ಆಧಾರದ ಮೇಲೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಎನ್‌ಜಿಟಿ ಈ ಸಮಸ್ಯೆ ಪರಿಸರದ ಮಾನದಂಡಗಳ ಅದರಲ್ಲಿಯೂ1986 ರ ಪರಿಸರ ಸಂರಕ್ಷಣಾ ಕಾಯಿದೆ ಮತ್ತು ಜೀವ ವೈವಿಧ್ಯ ಕಾಯಿದೆಯ  ಪಾಲನೆಗೆ ಸಂಬಂಧಿಸಿದೆ ಎಂದಿತು. ಕೇಂದ್ರ ಸಚಿವಾಲಯ, ಕೇರಳದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅವರಿಗೂ ನೋಟಿಸ್‌ ನೀಡಿತು. ಪ್ರಕರಣವನ್ನು ಚೆನ್ನೈನಲ್ಲಿರುವ ಎನ್‌ಜಿಟಿ ದಕ್ಷಿಣ ವಲಯ ಪೀಠ ಸೆಪ್ಟೆಂಬರ್ 30ರಂದು ಆಲಿಸಲಿದೆ.