ದೇಶದ್ರೋಹವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ 124 ಎ ಸೆಕ್ಷನ್ ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಏಪ್ರಿಲ್ 30ರೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ಮೇ 5 ರಂದು ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡುವಂತೆ ಸೂಚಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಆ ಬಳಿಕ ಪ್ರಕರಣವನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಐಪಿಸಿಯ ಸೆಕ್ಷನ್ 124ಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ಎಸ್ ಜಿ ವೊಂಬತ್ಕೆರೆ ಹಾಗೂ ಮಾಧ್ಯಮ ಸಂಪಾದಕರ ಸಂಘಟನೆ 'ಎಡಿಟರ್ಸ್ ಗಿಲ್ಡ್' ಸಲ್ಲಿಸಿದ್ದ ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ “ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇಂದಿಗೂ ಈ ಕಾನೂನು ಅಗತ್ಯವಿದೆಯೇ?” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ್ ತಿಲಕರ ಸದ್ದಡಗಿಸಲು ಬ್ರಿಟಿಷರು ಬಳಸಿದ ಕಾನೂನು ಇದು ಎಂದು ನ್ಯಾಯಾಲಯ ಹೇಳಿತ್ತು.
ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ಮತ್ತೊಬ್ಬ ವ್ಯಕ್ತಿ ಇಷ್ಟಪಡದಿದ್ದಾಗ ಈ ಸೆಕ್ಷನ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಕಾರ್ಯಾಂಗಕ್ಕೆ ಇದರ ಜವಾಬ್ದಾರಿ ಇಲ್ಲದೆ ಅದನ್ನು ಈಗ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ನ್ಯಾ. ರಮಣ ಟೀಕಿಸಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮತ್ತು ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಪತ್ರಕರ್ತರಾದ ಕಿಶೋರಚಂದ್ರ ವಾಂಗ್‌ಖೇಮ್ಚಾ ಮತ್ತು ಕನ್ಹಯ್ಯಾ ಲಾಲ್ ಶುಕ್ಲಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ನಂತರ ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋದಾಗ ದೇಶದ್ರೋಹ ಕಾನೂನಿನ ಪ್ರಸ್ತುತತೆ ಕುರಿತು ಪ್ರಶ್ನೆಗಳೆದಿದ್ದವು.