ಸುದ್ದಿಗಳು

ಕೇಂದ್ರ ಸಚಿವ ಡಿ ವಿ ಸದಾನಂದಗೌಡ ವಿರುದ್ಧ ಆಧಾರರಹಿತ ಸುದ್ದಿ ಪ್ರಕಟಿಸದಂತೆ ತಡೆ: ಬೆಂಗಳೂರು ನ್ಯಾಯಾಲಯ ಹೇಳಿದ್ದೇನು?

Bar & Bench

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಇತ್ತೀಚೆಗೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ನ್ಯಾಯಾಲಯ ನೀಡಿದ ಆದೇಶದ ವಿವರ ಹೀಗಿದೆ:

“ಫಿರ್ಯಾದಿ ಹೆಸರಾಂತ ವ್ಯಕ್ತಿಯಾಗಿದ್ದು ಕರ್ನಾಟಕದ ಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದು ಈಗ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ವಾಸ್ತವವಾಗಿ ಫಿರ್ಯಾದಿ ವಿರುದ್ಧ ಪ್ರತಿವಾದಿಗಳು ಸಮರ್ಥನೆ ಮತ್ತು ಸಾಕ್ಷ್ಯಾಧಾರವಿಲ್ಲದೆ ಸುಳ್ಳು ಮತ್ತು ಕ್ಷುಲ್ಲಕ ಸುದ್ದಿಗಳನ್ನು ಪ್ರಕಟಿಸಲಾರಂಭಿಸಿದವು. ಪ್ರತಿವಾದಿಗಳ ಕೃತ್ಯ ಫಿರ್ಯಾದುದಾರರ ಪ್ರತಿಷ್ಠೆಗೆ ಪ್ರತಿಕೂಲಕರವಾಗಿದ್ದು ಫಿರ್ಯಾದುದಾರರ ಆಪ್ತರು ಮತ್ತು ಕುಟುಂಬ ಸದಸ್ಯರ ಮೇಲೆ ಕೂಡ ಇದು ಪರಿಣಾಮ ಬೀರುತ್ತದೆ. ಜೊತೆಗೆ ಅವರ ರಾಜಕೀಯ ವೃತ್ತಿಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ” ಎಂಬುದಾಗಿ ಎಂದು 14ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

“ಅಲ್ಲದೆ ಪ್ರತಿವಾದಿಗಳು ತಮ್ಮ ಮಾಧ್ಯಮದಲ್ಲಿ ಪ್ರಕಟಿಸುವ ಹೇಳಿಕೆಗಳ ಲಾಭ ಪಡೆದು ಸೂಕ್ತವಲ್ಲದ ವಾತಾವರಣ ಸೃಷ್ಟಿಸಿ ತಮ್ಮನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿವಾದಿಗಳ ಕಾರ್ಯ ಅಕ್ರಮವಾಗಿದ್ದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಇದನ್ನು ಮಾಡುತ್ತಿದ್ದಾರೆ. ಪ್ರತಿವಾದಿಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಹರು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರಿಗೆ ಫಿರ್ಯಾದಿಯ ವ್ಯಕ್ತಿತ್ವವನ್ನು ಹಾಳು ಮಾಡಲು ಯಾವುದೇ ಹಕ್ಕು ಇಲ್ಲ. ಆದ್ದರಿಂದ ಪ್ರತಿವಾದಿಗಳು ಫಿರ್ಯಾದುದಾರರನ್ನು ಸಾಮಾನ್ಯ ಜನರ ಕಣ್ಣಲ್ಲಿ ಅವಮಾನಿಸುವಂತಹ ಮತ್ತು ಶೋಷಿಸುವಂತಹ ಯಾವುದೇ ಮಾನಹಾನಿಕರ ಹೇಳಿಕೆ ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ತಮ್ಮ ಪರವಾಗಿ ಮಧ್ಯಂತರ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕು ಇಲ್ಲದಿದ್ದರೆ ಬೇರಾವುದೇ ಮಾರ್ಗದಿಂದ ಸರಿಪಡಿಸಲಾಗದ ಹಾನಿ ಸಂಭವಿಸುತ್ತದೆ ಎಂದಿದ್ದಾರೆ" ಎಂಬ ವಿವರ ಆದೇಶದಲ್ಲಿದೆ.

ಈ ಸಂಬಂಧ ಫಿರ್ಯಾದುದಾರರ ಪರ ವಕೀಲರು ಶಾರದಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತಿರರು ಹಾಗೂ ಸೆಬಿ ಇನ್ನಿತರರ ನಡುವಣ ಪ್ರಕರಣ, ಎ ಕೆ ಸುಬ್ಬಯ್ಯ ಮತ್ತು ಬಿ ಎನ್ ಗರುಡಾಚಾರ್ ನಡುವಣ ಪ್ರಕರಣ, ಸಂತೋಷ್ ಗುರೂಜಿ ಮತ್ತು ಟಿವಿ -9 ಕನ್ನಡ ಮತ್ತಿರರ ನಡುವಣ ಪ್ರಕರಣ, ಸ್ವತಂತರ್ ಕುಮಾರ್ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ನಡುವಣ ಪ್ರಕರಣ, ಶಿವರಾಂ ಹೆಬ್ಬಾರ್ ಮತ್ತಿತರರು ಹಾಗೂ ಬಿಡಿವಿ ಸುದ್ದಿ ವಾಹಿನಿ ಮತ್ತಿತರರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.

ಈ ತೀರ್ಪುಗಳು ಮತ್ತು ದಾಖಲೆಯಲ್ಲಿ ಸಲ್ಲಿಸಲಾದ ಸಾಕ್ಷ್ಯಗಳನ್ನು ಆಧರಿಸಿ ಡಿ ವಿ ಸದಾನಂದಗೌಡ ಅವರ ವಿರುದ್ಧ ಮುಂದಿನ ವಿಚಾರಣೆಯವರೆಗೆ ಪ್ರತಿವಾದಿಗಳು ಸುಳ್ಳು. ಆಧಾರರಹಿತ ಹೇಳಿಕೆಗಳನ್ನು, ಅಜಾಗರೂಕ ಸುದ್ದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 19ರಂದು ನಡೆಯುವ ಸಾಧ್ಯತೆಗಳಿವೆ.