Justice DY Chandrachud and Justice Bela Trivedi 
ಸುದ್ದಿಗಳು

ಸೀಸರ್ ಪತ್ನಿಯಂತೆ ನ್ಯಾಯಾಧೀಶರು ಸಂಶಯಾತೀತರಾಗಿರಬೇಕು: ಸುಪ್ರೀಂ ಕೋರ್ಟ್

ನ್ಯಾಯಾಂಗ ಆದೇಶ ನೀಡುವ ನೆಪದಲ್ಲಿ ಪಕ್ಷಕಾರರಿಗೆ ಅನಗತ್ಯ ಒಲವು ತೋರಿಸುವುದು ಅತ್ಯಂತ ಕೆಟ್ಟ ರೀತಿಯ ನ್ಯಾಯಾಂಗ ಅಪ್ರಾಮಾಣಿಕತೆ ಮತ್ತು ದುರ್ನಡತೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಕರ್ತವ್ಯ ಲೋಪ ಎಸಗಿದ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ವಿಧಿಸಲಾದ ದಂಡ ಕುರಿತ ತೀರ್ಪನ್ನು ಎತ್ತಿ ಹಿಡಿಯುವ ವೇಳೆ ಸುಪ್ರೀಂ ಕೋರ್ಟ್‌ “ಸೀಸರ್‌ನ ಪತ್ನಿಯಂತೆ ನ್ಯಾಯಾಧೀಶರು ಸಂಶಯಾತೀತರಾಗಿರಬೇಕು” ಎಂದು ಅಭಿಪ್ರಾಯಪಟ್ಟಿತು [ಮುಜಾಫರ್ ಹುಸೇನ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ನ್ಯಾಯಾಧೀಶರು ಅಧಿಕೃತ ಅಂಶಗಳು ಮತ್ತು ಪ್ರಕರಣಕ್ಕೆ ಅನ್ವಯವಾಗುವ ಕಾನೂನಿನ ಆಧಾರದ ಮೇಲೆ ಕೇಸ್‌ಗಳನ್ನು ನಿರ್ಧರಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಹೇಳಿತು.

“ಬಾಹ್ಯ ಕಾರಣಗಳಿಗಾಗಿ ಪ್ರಕರಣ ನಿರ್ಧರಿಸಿದರೆ ಕಾನೂನಿನಂತೆ ಕರ್ತವ್ಯ ನಿರ್ವಹಿಸಿದಂತಾಗುವುದಿಲ್ಲ. ಸೀಸರ್‌ನ ಪತ್ನಿಯಂತೆ ನ್ಯಾಯಾಧೀಶರು ಸಂಶಯಾತೀತರಾಗಿರಬೇಕು” ಎಂದ ನ್ಯಾಯಮೂರ್ತಿಗಳು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಪಕ್ಷಕಾರರಿಗೆ ಅನಗತ್ಯ ಒಲವು ತೋರಿಸುವುದು ಅತ್ಯಂತ ಕೆಟ್ಟ ರೀತಿಯ ನ್ಯಾಯಾಂಗ ದುರ್ನಡತೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಂಗ ಅಪ್ರಾಮಾಣಿಕತೆ, ದುರ್ನಡತೆಯ ಮೂಲಕ ಕಾನೂನು ಮತ್ತು ನ್ಯಾಯದ ತತ್ವಗಳನ್ನು ಅನುಸರಿಸದೆ ಕೆಲವು ಕಕ್ಷಿದಾರರಿಗೆ ಹೆಚ್ಚಿನ ಭೂ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನಿವೃತ್ತ ನ್ಯಾಯಾಂಗ ಅಧಿಕಾರಿಯೊಬ್ಬರ ವಿರುದ್ಧ ಇಲಾಖಾ ತನಿಖೆ ನಡೆಸಲಾಗಿತ್ತು. ಒಂದನ್ನು ಹೊರತುಪಡಿಸಿ ಉಳಿದ 11 ಆರೋಪಗಳು ಸಾಬೀತಾಗಿವೆ ಎಂದು ತನಿಖಾಧಿಕಾರಿ ಹೇಳಿದ್ದರು. ಹೀಗಾಗಿ ಅವರ ಪಿಂಚಣಿಯಲ್ಲಿ ಶೇ 90ರಷ್ಟು ಕಡಿತಗೊಳಿಸಲು ಅಲಾಹಾಬಾದ್‌ ಹೈಕೋರ್ಟ್‌ ಪೂರ್ಣ ನ್ಯಾಯಾಲಯ ನಿರ್ಧರಿಸಿತು. ಇದನ್ನು ಅದೇ ನ್ಯಾಯಾಲಯದಲ್ಲಿ ನ್ಯಾಯಾಂಗ ಅಧಿಕಾರಿ ಪ್ರಶ್ನಿಸಿದರು. ಆದರೆ ಪಿಂಚಣಿ ಕಡಿತದ ಮೊತ್ತವನ್ನು ಶೇ 70ರಷ್ಟು ಇಳಿಸಿದ ಹೈಕೋರ್ಟ್‌ ಆರು ಆರೋಪಗಳನ್ನು ಎತ್ತಿ ಹಿಡಿಯಿತು.

ಇದನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ನ್ಯಾಯಾಂಗ ಆದೇಶ ನೀಡುವ ನೆಪದಲ್ಲಿ ಪಕ್ಷಕಾರರಿಗೆ ಅನಗತ್ಯ ಒಲವು ತೋರಿಸುವುದು ಅತಿ ಕೆಟ್ಟ ರೀತಿಯ ನ್ಯಾಯಾಂಗ ಅಪ್ರಾಮಾಣಿಕತೆ ಮತ್ತು ದುರ್ನಡತೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಏನು ಹೇಳುತ್ತದೆ ಸೀಸರ್‌ ಪತ್ನಿ ಕುರಿತ ನಾಣ್ಣುಡಿ?

ಜೂಲಿಯಸ್ ಸೀಸರ್‌ನ ಪತ್ನಿ ಪೊಂಪೀಯಾ ಕೇವಳ ಮಹಿಳೆಯರಿಗಾಗಿ ಹಬ್ಬವೊಂದನ್ನು ಏರ್ಪಡಿಸಿದ್ದಳು. ಆದರೆ ಪಬ್ಲಿಯಸ್ ಕ್ಲಾಡಿಯಸ್ ಪಲ್ಚರ್ ಎಂಬ ಯುವಕನೊಬ್ಬ ಆಕೆಯನ್ನು ಒಲಿಸಿಕೊಳ್ಳಲು ಅಲ್ಲಿಗೆ ಹೆಂಗಸರ ವೇಷ ತೊಟ್ಟು ಬಂದ. ಸೀಸರ್‌ನ ಪತ್ನಿಯೊಂದಿಗೆ ಸಿಕ್ಕಿಬಿದ್ದ. ಅವನನ್ನು ಬಂಧಿಸಲಾಯಿತು. ವಿಚಾರಣೆ ನಡೆಯಿತು. ಸೀಸರ್‌ ಅವನ ವಿರುದ್ಧ ಯಾವುದೇ ಸಾಕ್ಷ್ಯ ನೀಡದ ಕಾರಣ ಅವನನ್ನು ಬಿಡುಗಡೆ ಕೂಡ ಮಾಡಲಾಯಿತು.

ಸ್ವಲ್ಪ ದಿನಗಳ ಬಳಿಕ ಸೀಸರ್‌ ತನ್ನ ಪತ್ನಿ ಸುಲ್ಲಾಳಿಗೆ ವಿಚ್ಛೇದನ ನೀಡಿದ. ‘ಸೀಸರನ ಪತ್ನಿಯಾಗಿರುವವಳು ಯಾವತ್ತಿಗೂ ಸಂಶಯಾತೀತಳಾಗಿರಬೇಕು’ ಎಂಬ ಕಾರಣಕ್ಕೆ ಆತ ಹೆಂಡತಿಯನ್ನು ತೊರೆದಿದ್ದ. ಅದೇ ಈ ನಾಣ್ಣುಡಿಗೆ ಪ್ರೇರಣೆಯಾಯಿತು.