Lawyers, Supreme Court
Lawyers, Supreme Court  
ಸುದ್ದಿಗಳು

ವಕೀಲರ ಜೀವ ಮಿಗಿಲಲ್ಲ: ಮೃತ ನ್ಯಾಯವಾದಿಗಳ ಕುಟುಂಬಕ್ಕೆ ರೂ 50 ಲಕ್ಷ ಪರಿಹಾರ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

Bar & Bench

ಹುಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸಲ್ಲಿಸಲು ತಮ್ಮ ಸವಲತ್ತು ದುರುಪಯೋಗಪಡಿಸಿಕೊಳ್ಳದಂತೆ ವಕೀಲರಿಗೆ ಸುಪ್ರೀಂಕೋರ್ಟ್‌ ಮಂಗಳವಾರ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ವಕೀಲರು ಅಂತಹ ಪಿಐಎಲ್ ಸಲ್ಲಿಸದಂತೆ ತಡೆಯಲು ನ್ಯಾಯಾಲಯಗಳು ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಹೇಳಿತು.

ಕೋವಿಡ್‌ನಿಂದಾಗಿ ಮೃತಪಟ್ಟ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. "ಇದೊಂದು ʼಪ್ರಚಾರ ಹಿತಾಸಕ್ತಿ ಅರ್ಜಿʼಯಾಗಿದ್ದು ನೀವು ಕಪ್ಪು ಕೋಟ್ ಧರಿಸಿದ ಮಾತ್ರಕ್ಕೆ, ನಿಮ್ಮ ಜೀವ ಇತರರಿಗಿಂತ ಹೆಚ್ಚು ಅಮೂಲ್ಯವಾದುದು ಎಂದರ್ಥವಲ್ಲ. ಇಂತಹ ಹುಸಿ ಪಿಐಎಲ್‌ಗಳನ್ನು ಸಲ್ಲಿಸದಂತೆ ವಕೀಲರನ್ನು ತಡೆಯುವ ಕಾಲ ಬಂದಿದೆ " ಎಂದು ನ್ಯಾಯಾಲಯ ಗುಡುಗಿತು.

ಅರ್ಜಿದಾರ ವಕೀಲ ಪ್ರದೀಪ್ ಕುಮಾರ್ ಯಾದವ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನೀಡಲಾದ ಕಾರಣಗಳು ಅಪ್ರಸ್ತುತ ಎಂದು ನ್ಯಾಯಾಲಯ ಖಂಡಿಸಿತು. "ನಾವು ನಿಮ್ಮ ಕಾರಣಗಳನ್ನು ಗಮನಿಸಿದರೆ, ಅದರಲ್ಲಿ ಒಂದೂ ಸಹ ಸೂಕ್ತವಾಗಿಲ್ಲ. ʼಆಪ್ ಅಗರ್ ಕಟ್ ಪೇಸ್ಟ್ ಕರ್ ದೇಂಗೆ ತೋ ಐಸಾ ನಹೀ ಹೋತಾ ಕಿ ಜಡ್ಜಸ್‌ ಪಡೇಂಗೆ ನಹೀ (ನೀವು ಕಟ್‌ ಅಂಡ್‌ ಪೇಸ್ಟ್‌ ಮಾಡಿ ಅರ್ಜಿ ಸಲ್ಲಿಸಿದರೆ ನ್ಯಾಯಮೂರ್ತಿಗಳು ಅದನ್ನು ಓದುವುದಿಲ್ಲ ಎಂದಲ್ಲ)" ಎಂದು ಪೀಠ ಹೇಳಿತು.

ಕೋವಿಡ್‌ನಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ, ವಕೀಲರಿಗೆ ಮಾತ್ರವೇ ಯಾವುದೇ ವಿನಾಯಿತಿ ಸೃಷ್ಟಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು. "ವಕೀಲರು ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ನ್ಯಾಯಮೂರ್ತಿಗಳಿಂದ ಪರಿಹಾರಕ್ಕಾಗಿ ಬೇಡಿಕೆ ಇಟ್ಟು ಅವರ ಅನುಮತಿಗೆ ಕಾಯವುದು ನಡೆಯಬಾರದು. ಬಹಳಷ್ಟು ಜನರು ಸತ್ತಿದ್ದಾರೆ ಎಂದು ನಿಮಗೆ ತಿಳಿದಿದೆ. ನೀವು ಇದಕ್ಕೆ ಹೊರತಲ್ಲ” ಎಂದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.