Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh 
ಸುದ್ದಿಗಳು

ಸಹೋದ್ಯೋಗಿ ನ್ಯಾಯಮೂರ್ತಿ ಬಳಿ ದೆಹಲಿ ವ್ಯಕ್ತಿಯಿಂದ ನನ್ನ ಮಾಹಿತಿ ಸಂಗ್ರಹ: ಆದೇಶದಲ್ಲಿ ದಾಖಲಿಸಿದ ನ್ಯಾ. ಸಂದೇಶ್‌

Siddesh M S

ದೆಹಲಿಯಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮ ಬಗೆಗೆ ಮಾಹಿತಿ ಪಡೆದಿದ್ದಾಗಿ ಹಾಲಿ ನ್ಯಾಯಮೂರ್ತಿಯೊಬ್ಬರು ತಮಗೆ ಹೇಳಿದ್ದಾರೆ ಎಂದು ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಸೋಮವಾರ ಭ್ರಷ್ಟಾಚಾರ ಪ್ರಕರಣವೊಂದರ ಜಾಮೀನು ವಿಚಾರಣೆ ವೇಳೆ ಆದೇಶದಲ್ಲಿ ದಾಖಲಿಸಿದ್ದಾರೆ. ಆ ಮೂಲಕ ತಮಗೆ ವರ್ಗಾವಣೆ ಬೆದರಿಕೆ ಇದೆ ಎಂದು ಈ ಹಿಂದೆ ಮೌಖಿಕವಾಗಿ ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ್ದ ಅಂಶಗಳ ಕುರಿತಾದ ವಿಸ್ತೃತ ಘಟನಾವಳಿಗಳ ಬಗ್ಗೆ ಆದೇಶದಲ್ಲಿ ದಾಖಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕರಾಗಿದ್ದ ಉಪ ತಹಶೀಲ್ದಾರ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂದೇಶ್‌ ಅವರು ಈ ವಿಚಾರಗಳನ್ನು ಪ್ರಸ್ತಾಪಿಸಿದ್ದು, ಆದೇಶದಲ್ಲಿ ಅವುಗಳನ್ನು ದಾಖಲಿಸುವ ಮೂಲಕ ಮಹತ್ವದ ಹೆಜ್ಜೆ ಇರಿಸಿದ್ದಾರೆ.

“2022ರ ಜುಲೈ 7ರಂದು ತಾನು ಮಾಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮನವಿ ಸಲ್ಲಿಸಲಾಗಿದೆ ಎಂದು ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ತಿಳಿಸಿದ್ದಾರೆ. ಅಲ್ಲದೇ, ನ್ಯಾಯದಾನ ಮಾಡುವಾಗ ದಾಳಿ ಅಥವಾ ಹಸ್ತಕ್ಷೇಪ ಮಾಡಬಾರದು. ಇದರಿಂದ ನ್ಯಾಯದಾನದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ. 2022ರ ಜೂನ್‌ 29ರಂದು ವಿಚಾರಣೆ ನಡೆಸಿದಾಗ ನೈಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿರುವ ಎಸಿಬಿಯ ಅಸಮರ್ಥತೆಯ ಬಗ್ಗೆ ಬೆರಳು ಮಾಡಲಾಗಿತ್ತು. ಆನಂತರ ಪ್ರಕರಣವನ್ನು ಜುಲೈ 4ಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಈ ನಡುವೆ ಜುಲೈ 1ರಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡುವುದಕ್ಕಾಗಿ ಹೈಕೋರ್ಟ್‌ನಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು. ಈ ವೇಳೆ ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಬಳಿ ಬಂದು ದೆಹಲಿಯಿಂದ ಕರೆಯೊಂದನ್ನು ಸ್ವೀಕರಿಸಿದ್ದು(ಯಾರು ಕರೆ ಮಾಡಿದ್ದರು ಎಂಬುದನ್ನು ತಿಳಿಸಲಿಲ್ಲ), ದೆಹಲಿಯಿಂದ ಕರೆ ಮಾಡಿದ್ದ ವ್ಯಕ್ತಿ ನನ್ನ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದರು. ಆಗ ತಕ್ಷಣ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದೆ. ಆದರೆ, ನ್ಯಾಯಮೂರ್ತಿಯವರು ಅಲ್ಲಿಗೆ ಮಾತು ನಿಲ್ಲಿಸಲಿಲ್ಲ. ಎಡಿಜಿಪಿ ಅವರು ಉತ್ತರ ಭಾರತದವರಾಗಿದ್ದು, ಅವರು ಪ್ರಭಾವಿಯಾಗಿದ್ದಾರೆ ಎಂದರು. ಅಲ್ಲದೇ, ಆ ನ್ಯಾಯಮೂರ್ತಿ ಅವರು ಕೆಲವು ವರ್ಗಾವಣೆ ಉದಾಹರಣೆಗಳನ್ನೂ ನೀಡಿದರು” ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

“ಎಸಿಬಿ ಎಡಿಜಿಪಿಯ ಸೇವಾ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದ್ದು, 2009-10ರಲ್ಲಿ ಸಂಬಂಧಿತ ಪ್ರಾಧಿಕಾರವು ಅಧಿಕಾರಿಯು ತನ್ನ ಕರ್ತವ್ಯ ನಿಭಾಯಿಸುವಾಗ ಅಥವಾ ಸಹೋದ್ಯೋಗಿ ಅಧಿಕಾರಿಗಳ ಮೇಲ್ವಿಚಾರಣೆ ಮಾಡುವ ಪೊಲೀಸ್‌ ವರ್ಚಸ್ಸಿಗೆ ಪೂರಕವಾದ ಅಗತ್ಯ ಆದ್ಯತೆಯನ್ನು ನೀಡಬೇಕು ಎಂಬ ಪ್ರತಿಕ್ರಿಯೆ ದಾಖಲಿಸಿದೆ. ಅಲ್ಲದೇ, ಎಡಿಜಿಪಿ ಮನೆಯ ಮೇಲೆ ಸಿಬಿಐ ದಾಳಿ ನಡೆಸಿ, ವರದಿ ಸಲ್ಲಿಸಿ, ಪ್ರಕರಣದ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಕೋರಿತ್ತು. ಈಗ ಸಿಬಿಐ ತನ್ನ ವರದಿಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸಿದೆ. ಈ ಎಲ್ಲಾ ದಾಖಲೆಗಳು ಹಾಗೂ ಎಸಿಬಿ ಸಲ್ಲಿಸಿರುವ ʼಬಿʼ ರಿಪೋರ್ಟ್‌ಗಳ ವರದಿ, ಐದು ಪ್ರಕರಣಗಳಿಗೆ ಸಂಬಂಧಿಸಿದ ವಿವರಣೆ ಮತ್ತು ಉಳಿದ 99 ʼಬಿʼ ರಿಪೋರ್ಟ್‌ಗಳನ್ನು ಅಪರಾಧ ಮತ್ತಿತರ ಮಾಹಿತಿ ನೀಡದೇ ನ್ಯಾಯಾಲಯಕ್ಕೆ ಸಾಗ ಹಾಕಲಾಗಿದೆ” ಎಂದು ಅವರು ಅದೇಶದಲ್ಲಿ ವಿವರಿಸಿದ್ದಾರೆ.

“ಹೀಗಾಗಿ, ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೂಕ್ತ ದಾಖಲೆ ಸಲ್ಲಿಸುವಂತೆ ಸಂಬಂಧಿತ ವಿಚಾರಣಾಧೀನ ನ್ಯಾಯಾಲಯಗಳಿಗೆ ಹೈಕೋರ್ಟ್‌ ಆದೇಶಿಸಿತ್ತು. ಇದೆಲ್ಲವನ್ನೂ ಪರಿಗಣಿಸಿ, ನ್ಯಾಯಾಲಯಕ್ಕೆ ಬೆದರಿಕೆ ಹಾಕಿರುವುದು, ಅತ್ಯುನ್ನತ ಸ್ಥಾನದಲ್ಲಿರುವ ಅಧಿಕಾರಿಯು ನ್ಯಾಯಾಲಯಕ್ಕೆ ಜನರ ಹಿತದೃಷ್ಟಿಯಿಂದ ಸಹಾಯ ಮಾಡಿಲ್ಲ ಎಂಬುದು ಪೀಠಕ್ಕೆ ಮನವರಿಕೆಯಾಗಿದೆ. ಹೀಗಾಗಿ, 2022ರ ಜುಲೈ 7ರಂದು ಮಾಡಿರುವ ಆದೇಶವು ಸಾರ್ವಜನಿಕ ಹಿತಾಸಕ್ತಿಯನ್ನು ಏಕಮಾತ್ರವಾಗಿ ಪರಿಗಣಿಸಲಾಗಿದ್ದು, ಅಗತ್ಯಬಿದ್ದಾಗ ಸಾಂವಿಧಾನಿಕ ನ್ಯಾಯಾಲಯವು ತನಿಖೆಯ ಮೇಲೆ ನಿಗಾ ಇಟ್ಟಿದೆ. ಸೂಕ್ತವಾದ ತನಿಖೆ, ಉಮೇದು ಇಲ್ಲದಿರುವುದು ಸರ್ಕಾರವು ತನಿಖಾ ಸಂಸ್ಥೆಯು ಸತ್ಯ ಪತ್ತೆ ಮಾಡಲು ಸಹಾಯ ಮಾಡುತ್ತಿಲ್ಲ ಎಂಬುದು ಗೊತ್ತಾದಾಗ, ತನಿಖಾ ಸಂಸ್ಥೆಯು ವಿಚಾರಣೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಕ್ಕೆ ಅಡ್ಡಿಯಾಗುತ್ತದೆ ಎಂದು ತಿಳಿದು, ಪರಿಸ್ಥಿತಿಯ ಅಗತ್ಯದ ಹಿನ್ನೆಲೆಯಲ್ಲಿ ಎಡಿಜಿಪಿಯ ಸೇವಾ ದಾಖಲೆ ಮತ್ತು ವಿಚಾರಣಾಧೀನ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಬಿ ರಿಪೋರ್ಟ್‌ಗಳನ್ನು ಸಾರ್ವಜನಿಕ ಹಿತದೃಷ್ಟಿಯನ್ನು ಏಕಮಾತ್ರವಾಗಿ ಇರಿಸಿಕೊಂಡು ಪರಿಗಣಿಸಲಾಗಿದೆ. ಅಗತ್ಯಬಿದ್ದಾಗ ಮಾತ್ರ ಸಾಂವಿಧಾನಿಕ ನ್ಯಾಯಾಲಯವು ತನಿಖೆ ಮೇಲೆ ನಿಗಾ ಇಟ್ಟಿದೆ. ನ್ಯಾಯಾಲಯಕ್ಕೆ ಬೆದರಿಕೆ ಹಾಕಿರುವ ವಿಚಾರವನ್ನೂ ದಾಖಲೆಯಲ್ಲಿ ಸೇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂತರದ ಬೆಳವಣಿಗೆಗಳನ್ನು ಅಡಕಗೊಳಿಸಲಾಗಿದೆ” ಎಂದು ವಿಸ್ತೃತ ಆದೇಶದಲ್ಲಿ ನ್ಯಾಯಮೂರ್ತಿಗಳು ವಿವರಿಸಿದ್ದಾರೆ.

“ನ್ಯಾಯಾಲಯವು ಕಳೆದ ವಿಚಾರಣೆಯಲ್ಲಿ ಮಾಡಿದ್ದ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ವಕೀಲ ಪ್ರಸನ್ನ ಕುಮಾರ್‌ ಅವರು ಅಕ್ರಮ ಗಣಿಗಾರಿಕೆ ಮತ್ತು ಅದಿರು ರಫ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಳ್ಳಾರಿಯ ಅಂದಿನ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಹಾಲಿ ಎಸಿಬಿ ಎಡಿಜಿಪಿ ಅವರ ನಿವಾಸ ಮೇಲಿನ ದಾಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದಾರೆ. ಎಸಿಬಿ ಪರ ವಕೀಲ ಮನಮೋಹನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮನವಿ ಸಲ್ಲಿಸಿದ್ದು, ಸದರಿ ಅರ್ಜಿಯು ನಾಳೆ ವಿಚಾರಣೆಗೆ ಬರಲಿದೆ. ಹೀಗಾಗಿ, ಹಾಲಿ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದ್ದಾರೆ. ಈ ಸಂಬಂಧದ ಮೆಮೊವನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ. ಅರ್ಜಿದಾರರ ವಕೀಲರಿಗೆ ಎಸಿಬಿ ವಕೀಲರು ಮೆಮೊವನ್ನು ನೀಡಬೇಕು” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

“ನ್ಯಾಯಿಕ ರಿಜಿಸ್ಟ್ರಾರ್‌ ಅವರಿಗೆ ʼಬಿʼ ರಿಪೋರ್ಟ್‌ಗಳ ವರದಿ ಸಲ್ಲಿಸಲು ನಿರ್ದೇಶಿಸಲಾಗಿತ್ತು. ಅಂತೆಯೇ ಅವರು 18 ಜಿಲ್ಲೆಗಳಲ್ಲಿ ಸಲ್ಲಿಕೆಯಾಗಿರುವ ಬಿ ರಿಪೋರ್ಟ್‌ ಸಲ್ಲಿಸಿದ್ದು, ಉಳಿದ ಜಿಲ್ಲೆಗಳಲ್ಲಿ ಸಲ್ಲಿಕೆಯಾಗಿರುವ ಬಿ ರಿಪೋರ್ಟ್‌ ಅನ್ನು ಇನ್ನಷ್ಟೇ ಪಡೆದುಕೊಳ್ಳಬೇಕಿದೆ. ಇವುಗಳನ್ನು ಅಧಿಕೃತವಾಗಿ ಸ್ವೀಕರಿಸಲಾಗಿದೆ. ಎಸಿಬಿ ವಕೀಲರು ಇಲ್ಲಿಯವರೆಗೆ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲರು ಎಸಿಬಿ ವಕೀಲರು ವಿಚಾರಣೆಯನ್ನು ಮುಂದೂಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ” ಎಂದೂ ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.

“ಹೈಕೋರ್ಟ್‌ ಆದೇಶವನ್ನು ಎಡಿಜಿಪಿ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಮನವಿಯು ನಾಳೆ ವಿಚಾರಣೆಗೆ ನಿಗದಿಯಾಗಿರುವುದರಿಂದ ಎರಡು ದಿನ ಕಾಲಾವಕಾಶ ನೀಡುವುದು ಸೂಕ್ತವಾಗಿದೆ. ಅಲ್ಲದೇ ಕಸ್ಟಡಿಯಲ್ಲಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ವಿಚಾರ ಪರಿಗಣಿಸಿ, ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಲಾಗಿದೆ” ಎಂದು ಪೀಠ ಹೇಳಿದೆ.

ಸಿಬಿಐ ದಾಳಿ

2009-10ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ರಫ್ತು ಪ್ರಕರಣದಲ್ಲಿ ಸಂಬಂಧಿತ ಇಲಾಖೆ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಆಳವಾದ ತನಿಖೆ ನಡೆಸಲಾಗಿಲ್ಲ. ಹೆಚ್ಚಿನ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಬರೆದಿರುವ ಪತ್ರದ ಕುರಿತಂತೆ ಏನಾದರೂ ಪ್ರಗತಿಯಾಗಿದೆಯೇ ಎಂದು ನ್ಯಾ. ಸಂದೇಶ್‌ ಪ್ರಶ್ನಿಸಿದರು. ಬಳ್ಳಾರಿ ಜಿಲ್ಲೆಯ ಅಂದಿನ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಹಾಗೂ ಹಾಲಿ ಎಸಿಬಿ ಎಡಿಜಿಪಿಯಾದ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಮನೆಯ ಮೇಲೆ ದಾಳಿ ನಡೆದಿತ್ತು ಎಂಬುದನ್ನು ಪೀಠವು ಖಾತರಿಪಡಿಸಿಕೊಂಡಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಸಿಬಿ ಎಡಿಜಿಪಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ನಿಮಗೆ (ನ್ಯಾ. ಸಂದೇಶ್‌) ಬೆದರಿಕೆ ಹಾಕಿರುವುದರ ಕುರಿತು ತಿಳಿಸಬೇಕು ಎಂದರು. ಅಲ್ಲದೇ ಎಸಿಬಿ ವಕೀಲ ಮನಮೋಹನ್‌ ಕುರಿತು ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಆಕ್ಷೇಪಿಸಿದರು.

ಆಗ ಪೀಠವು “ಕಳೆದ ವಿಚಾರಣೆಯ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ನೀವು ಈಗ ಆ ವಿಚಾರ ಎತ್ತಲಾಗದು. ನ್ಯಾಯಾಲಯಕ್ಕೆ ಮನವಿ ಸಲ್ಲಿಸದೇ ಹೇಗೆ ವಾದ ಮಂಡಿಸುತ್ತೀರಿ? ನಿಮಗೆ ಯಾವ ಲೋಕಸ್‌ ಸ್ಟ್ಯಾಂಡಿ ಇದೆ? ದಾಖಲೆಯಲ್ಲಿ ಬರುವುದಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಮನವಿ ಸಲ್ಲಿಸಿಲ್ಲ. ನೀವು ಮನವಿ ಸಲ್ಲಿಸಿ. ನಾವು ಅದನ್ನು ಪರಿಗಣಿಸುತ್ತೇವೆ. ಹೀಗಾಗಿ, ನಿಮಗೆ ಯಾವುದೇ ಲೋಕಸ್‌ ಸ್ಟ್ಯಾಂಡಿ ಇಲ್ಲ” ಎಂದರು.

ಸಂಬಂಧಿತರ ಗಮನಕ್ಕೆ ಬೆದರಿಕೆ ವಿಚಾರ ತರಲಾಗಿದೆ

“ಎಡಿಜಿಪಿಯ ಸ್ಥಾನದಲ್ಲಿದ್ದೂ ಲಂಚ ಪ್ರಕರಣದ ತನಿಖೆ ನಡೆಸದ ಹಿನ್ನೆಲೆಯಲ್ಲಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ನಾನು ಅಧಿಕೃತವಾಗಿ ಉಲ್ಲೇಖಿಸಿದ್ದು ಏಕೆಂದರೆ ನನಗೆ ಬೆದರಿಕೆ ಇತ್ತು. ಏನು ಬೆದರಿಕೆ ಎಂಬುದನ್ನೂ ನಾನು ಅಧಿಕೃತವಾಗಿ ಉಲ್ಲೇಖಿಸುತ್ತೇನೆ. ನ್ಯಾಯಾಲಯಕ್ಕೆ ಬೆದರಿಕೆ ಹಾಕಲಾಗದು. ನಿಮಗೆ ಬೇಕೆಂದರೆ ಅದನ್ನು ನಾನು ಅಧಿಕೃತವಾಗಿ ಉಲ್ಲೇಖಿಸುತ್ತೇನೆ. ಬೆದರಿಕೆಗೆ ಸಂಬಂಧಿಸಿದಂತೆ ಸಂಬಂಧಿತರ ಗಮನಕ್ಕೆ ತಂದಿದ್ದೇನೆ. ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಒಡ್ಡಿದ ಬೆದರಿಕೆಯಾಗಿದೆ. ಅಲ್ಲದೇ, ಅದು ನ್ಯಾಯದಾನದಲ್ಲಿನ ಹಸ್ತಕ್ಷೇಪವಾಗಿದೆ. ನನ್ನ ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಯ ನಡುವಿನ ಸಂಭಾಷಣೆಯನ್ನೂ ಲಿಖಿತವಾಗಿ ಬರೆಸುತ್ತೇನೆ. ನ್ಯಾಯಾಲಯಕ್ಕೆ ಬೆದರಿಕೆ ಹಾಕಿದ್ದರಿಂದ ಎಡಿಜಿಪಿಯ ಸೇವಾ ದಾಖಲೆ ಮತ್ತು ಎಸಿಬಿ ಸಲ್ಲಿಸಿರುವ ʼಬಿʼ ರಿಪೋರ್ಟ್‌ಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ನನ್ನನ್ನು ತಪ್ಪಿಗೆ ಸಿಲುಕಿಸುವ ಕೆಲಸವನ್ನು ಇಲ್ಲಿ ನೀವು ಮಾಡಬೇಡಿ. ಇಲ್ಲಿ ನ್ಯಾಯಮೂರ್ತಿಯ ಹೆಸರನ್ನು ನಾನು ಬಹಿರಂಗಪಡಿಸುವ ಅಗತ್ಯವಿಲ್ಲ” ಎಂದರು.

“ನೀವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದೀರಿ. ಸುಪ್ರೀಂ ಕೋರ್ಟ್‌ ನನಗೆ ಅಂಥ ಆದೇಶ ಮಾಡಬಾರದು ಎಂದು ಹೇಳಿದರೆ ನಾನು ಅದನ್ನು ಪಾಲಿಸುತ್ತೇನೆ. ಹಾಲಿ ನ್ಯಾಯಮೂರ್ತಿಯಿಂದ ಈ ನ್ಯಾಯಾಲಯಕ್ಕೆ ಬೆದರಿಕೆ ಹಾಕಲಾಗಿದೆ. ಹಾಲಿ ನ್ಯಾಯಮೂರ್ತಿಯ ದೃಷ್ಟಿಕೋನದಿಂದ ಇದು ಸರಿಯೇ? ನ್ಯಾಯಾಲಯಕ್ಕೆ ಬೆದರಿಕೆ ಹಾಕದಿದ್ದರೆ ಅಧಿಕಾರಿಯ ಸೇವಾ ದಾಖಲೆ ಸಲ್ಲಿಸಲು ಮತ್ತು ಎಸಿಬಿಯ ದಕ್ಷತೆಯನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಅಲುಗಾಡಿಸುವುದಲ್ಲದೇ ಬೇರೇನು ಅಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಈ ಕುರಿತು ತನಿಖೆ ನಡೆಯಲಿ ಬಿಡಿ. ನಿಮ್ಮ ಪ್ರಕಾರ ನಾನು ಸುಳ್ಳು ಹೇಳುತ್ತಿದ್ದೇನೆ ಎಂದೆನಿಸಿರಬಹುದು. ನಾನು ಅದನ್ನು ಆದೇಶದಲ್ಲಿ ಸ್ಪಷ್ಟಪಡಿಸುತ್ತೇನೆ. ಹಿರಿಯ ವಕೀಲರಾಗಿ ನೀವು ಸಹ ನ್ಯಾಯಾಲಯದ ಸ್ವಾತಂತ್ರ್ಯವನ್ನು ರಕ್ಷಿಸಬೇಕು” ಎಂದರು.

ನಾನು ಮೇಲಿಂದ ಉದುರಿ ಬಿದ್ದಿಲ್ಲ

“ನಾನು ಯಾವುದೇ ವಕೀಲರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ನನ್ನ ಪ್ರಶ್ನೆಗೆ ವಕೀಲರು ಉತ್ತರಿಸಿಲ್ಲ. ಹಾರನಹಳ್ಳಿ ಅವರೇ ನ್ಯಾಯಾಲಯಕ್ಕೆ ಸಲಹೆ ಮಾಡುವುದನ್ನು ಬಿಟ್ಟು ಆರೋಪಿಯನ್ನು ರಕ್ಷಿಸಲು ಯತ್ನಿಸಿದರೆ ಏನು ಮಾಡಬೇಕು? ವಿಷಯ ಬಚ್ಚಿಡುತ್ತಿದ್ದೀರಿ ಎಂದು ಹೇಳಿದ್ದೇನೆ? ನಾನೂ ವಕೀಲನಾಗಿ ಪ್ರಾಕ್ಟೀಸ್‌ ಮಾಡಿದ್ದೀನಿ, ಮೇಲಿಂದ ಉದುರಿಬಿದ್ದಿಲ್ಲ. ಆನಂತರ ಎಸಿಬಿ ವಕೀಲರು ಬಂದು ಕ್ಷಮೆ ಕೇಳಿ, ನನಗೆ ಅಲ್ಲಿ (ಎಸಿಬಿ) ಮುಂದುವರಿಯುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಈಗ ಅಲ್ಲೇ ಮುಂದುವರಿಯಲು ಅವರಿಗೆ ಯಾರು ಒತ್ತಾಯ ಮಾಡಿದರೋ ನನಗೆ ಗೊತ್ತಿಲ್ಲ” ಎಂದರು.

“ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಎರಡನೇ ಆರೋಪಿಯು ಜಿಲ್ಲಾಧಿಕಾರಿ ಕಚೇರಿಯ ಅಪೀಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಬಂಧಿತ ಉಪ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಯ ಸಹಾಯಕರಾಗಿರುವ ಅಧಿಕಾರಿ ಹೇಳಿದ್ದಾರೆ. ಆದರೆ, ಜಿಲ್ಲಾಧಿಕಾರಿ ಇದನ್ನು ನಿರಾಕರಿಸುತ್ತಾರೆ. ಇದನ್ನೇ ಎಸಿಬಿ ಮತ್ತು ರಾಜ್ಯ ಸರ್ಕಾರ ಹೇಳುತ್ತಿವೆ. ಇಲ್ಲಿ ಎಸಿಬಿ ಮತ್ತು ರಾಜ್ಯ ಸರ್ಕಾರ ಸತ್ಯಾಂಶ ಮುಚ್ಚಿಡುತ್ತಿಲ್ಲವೇ? ಸಂಸ್ಥೆಯನ್ನು ರಕ್ಷಿಸಲು ನೀವು ಇರುವುದು, ಆರೋಪಿಗಳನ್ನು ರಕ್ಷಿಸಲು ಅಲ್ಲ ಎಂದು ಎಸಿಬಿ ವಕೀಲರನ್ನು ಕುರಿತು ಹೇಳಿದ್ದೇನೆ. ಎಸಿಬಿಯ ಪೊಲೀಸ್‌ ವರಿಷ್ಠಾಧಿಕಾರಿಯೇ ಆರೋಪಿ ನೀಡಿರುವ ಹೇಳಿಕೆಯನ್ನು ತೋರಿಸಿದ್ದಾರೆ” ಎಂದರು.

ವಕೀಲರು ಪಕ್ಷಕಾರರ ತಾಳಕ್ಕೆ ಕುಣಿಯಬಾರದು

“ಎಸಿಬಿ ಬಿ ರಿಪೋರ್ಟ್‌ ಹಾಕಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುತ್ತೇನೆ ಎಂದು ಹೇಳಿದ ಮನಮೋಹನ್‌ ಅವರು ಅವುಗಳನ್ನು ಸಲ್ಲಿಸಲಿಲ್ಲ. ಆನಂತರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಇದನ್ನೂ ನಾನು ಅಧಿಕೃತವಾಗಿ ಉಲ್ಲೇಖಿಸಿದ್ದೇನೆ. ವಕೀಲರಾಗಿ ಅವರು ಪಕ್ಷಕಾರರ ತಾಳಕ್ಕೆ ಕುಣಿಯಬಾರದು. ನಾವು ಇಲ್ಲಿರುವುದು ನ್ಯಾಯದಾನ ಮಾಡುವುದಕ್ಕಾಗಿ ಎಂಬುದನ್ನು ತಿಳಿದುಕೊಳ್ಳಬೇಕು. ವಕೀಲರನ್ನು ಕುರಿತು ನಾನು ಅಂದೇ ನೀವು ಸಂಸ್ಥೆಯ ಭವಿಷ್ಯ, ಇದರ ಬಗ್ಗೆ ನೀವು ಕಾಳಜಿ ವಹಿಸಬೇಕು ಎಂದು ಬುದ್ದಿವಾದ ಹೇಳಿದ್ದೇನೆ. ನನಗೆ ಇಲ್ಲಿ ವೈಯಕ್ತಿಕವಾಗಿ ಆಗಬೇಕಾದ್ದೇನು ಇಲ್ಲ. ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಜನರಿಗೆ ಒಳಿತಾದರೆ ಸಾಕು” ಎಂದು ಅಭಿಪ್ರಾಯಪಟ್ಟರು.

ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ವಿಭಾಗೀಯ ಪೀಠದ ಮುಂದೆ ಎಸಿಬಿ ಬೇಡ ಎಂದು ವಾದಿಸಿದ್ದಾರೆ ಎಂದು ವಕೀಲರೊಬ್ಬರು ಹೇಳಿದರು. ಆಗ ನ್ಯಾ. ಸಂದೇಶ್‌ ಅವರು “ವಿಭಾಗೀಯ ಪೀಠದ ಮುಂದೆ ಎಸಿಬಿ ಬೇಡ ಎಂದು ಹೇಳುತ್ತೀರಿ. ಇಲ್ಲಿ ಎಸಿಬಿ ಎಡಿಜಿಬಿ ಬೇಕು ಎನ್ನುತ್ತೀರಲ್ಲಾ” ಎಂದು ನಕ್ಕರು. ಅಶೋಕ್‌ ಹಾರನಹಳ್ಳಿ ಅವರೇ ಎರಡು ಅಳತೆಗೋಲು ಇರಬಾರದು. ಒಂದೇ ಅಳತೆಗೋಲು ಇರಬೇಕು. ಅಲ್ಲಿ ಎಸಿಬಿ ಬೇಡ ಲೋಕಾಯುಕ್ತ ಬೇಕು ಎನ್ನುತ್ತೀರಿ. ಇಲ್ಲಿ ಎಸಿಬಿ ಎಡಿಜಿಪಿ ಬೇಕು ಎಂದು ವಾದಿಸುತ್ತೀರಿ ಎಂದರು.

ಹಿಂಬಾಗಿಲ ಕೆಲಸ ಗೊತ್ತಿಲ್ಲ-ಬೆನ್ನಿಗೆ ಚೂರಿ ಹಾಕಲ್ಲ

“ನೀವೆ ನ್ಯಾಯಮೂರ್ತಿಯಾಗಿ, ನಿಮಗೆ ಬೆದರಿಕೆ ಹಾಕಿದ್ದರೆ ಏನು ಮಾಡುತ್ತಿದ್ದಿರಿ. ನಮಗೆ ಹಿಂಬಾಗಿಲ ಕೆಲಸ ಮಾಡಿ ಅಭ್ಯಾಸವಿಲ್ಲ. ಇದ್ದರೆ ನೇರವಾಗಿ ಹೇಳುತ್ತೇವೆ. ಇಲ್ಲವಾದರೆ ಇಲ್ಲ. ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ. ನ್ಯಾಯಾಲಯದಲ್ಲಿ ನಡೆದಿದ್ದನ್ನು ಅಲ್ಲಿಗೆ ಬಿಟ್ಟುಬಿಡುತ್ತೇನೆ. ಮನಮೋಹನ್‌ ಅವರಲ್ಲ, ಯಾರಾದರೂ ಅಷ್ಟೆ. ನ್ಯಾಯಾಲಯಕ್ಕೆ ಬೆದರಿಕೆ ಮತ್ತು ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಬಾರದು. ನಾನು ಬೇರೆ ನ್ಯಾಯಮೂರ್ತಿಗಳಿಗೆ ಹೇಳಲಾಗುತ್ತದೆಯೇ. ಅದನ್ನು ಹೇಳಬಾರದು ಅಲ್ಲವೇ? ಹಾಲಿ ನ್ಯಾಯಮೂರ್ತಿ ಯಾವೆಲ್ಲಾ ಪದಗಳನ್ನು ಬಳಸಿದ್ದಾರೆ ಎಂಬುದನ್ನು ನಾನು ಅಧಿಕೃತವಾಗಿ ಉಲ್ಲೇಖಿಸುತ್ತೇನೆ” ಎಂದರು.

ಮಾಧ್ಯಮಗಳಿಗೆ ಮಾಹಿತಿ ಹೇಗೆ ಸಿಗುತ್ತದೆ?

ಇಲ್ಲಿಯವರೆಗೆ ತನಿಖೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಲು ಎಸಿಬಿ ವಕೀಲರಿಗೆ ನಿರ್ದೇಶಿಸಲಾಗಿದೆ. ಮೊನ್ನೆಯೂ ಎಸಿಬಿ ದಾಳಿ ಮಾಡಲಾಗಿದೆ. ಆಗ ಏನೇನು ಸಿಕ್ಕಿಲ್ಲ ಎಂದು ಹೇಳಿದ್ದೀರಿ. ಆಮೇಲೆ ದಾಖಲೆ ಸಿಕ್ಕಿದೆ ಎಂದು ಹೇಳಿದ್ದಿರಿ. ಏನೇನು ಸಿಕ್ಕಿದೆ? ಆಸ್ತಿಯ ದಾಖಲೆಗಳು ಸಿಕ್ಕಿದೆಯಾ? ಜಿಲ್ಲಾಧಿಕಾರಿಗೆ ಬೆಂಗಳೂರು ಸುತ್ತಮುತ್ತ 30 ಎಕರೆ ಜಮೀನು ಇದೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದವರು ಯಾರು? ಎಸಿಬಿ ದಾಳಿ ಮಾಡಿದ್ದನ್ನು ಮಾಧ್ಯಮಗಳಿಗೆ ಏಕೆ ಮಾಹಿತಿ ಕೊಡುತ್ತೀರಿ? ಅದು ಮಾಧ್ಯಮಗಳಲ್ಲಿ ನೇರಪ್ರಸಾರವಾಗುತ್ತದಲ್ಲ? ಎಸಿಬಿಯವರು ಗೌಪ್ಯತೆ ಕಾಪಾಡಬೇಕಲ್ಲವೇ? ಈ ಮಾಹಿತಿಯಲ್ಲಾ ಮಾಧ್ಯಮಗಳಿಗೆ ಹೇಗೆ ಸಿಗುತ್ತದೆ? ಇನ್ನೂ ಶೋಧ ನಡೆಸಲು ಮನೆಗೆ ಪ್ರವೇಶವೇ ಆಗಿರುವುದಿಲ್ಲ. ಅದಾಗಲೇ ಮಾಧ್ಯಮಗಳಲ್ಲಿ ನೇರಪ್ರಸಾರವಾಗುತ್ತಿರುತ್ತದೆ. ಗೌಪ್ಯತೆ ಕಾಪಾಡುವುದು ನಿಮ್ಮ ಕರ್ತವ್ಯವಲ್ಲವೇ? ತನಿಖೆಯ ಮಾಹಿತಿ ನ್ಯಾಯಾಲಯ ಮತ್ತು ಎಸಿಬಿಯ ನಡುವೆ ಮಾತ್ರ ಇರಬೇಕು. ಎದುರಾಳಿಗಳಿಗೂ ಮಾಹಿತಿ ನೀಡುವಂತಿಲ್ಲ ಎಂದು ಪೀಠವು ನಿರ್ದೇಶಿಸಿತು.

ಡಿ ಸಿಯನ್ನು ಆರೋಪಿ ಮಾಡಲು ಎಸಿಬಿ ಸಿದ್ಧವಿರಲಿಲ್ಲ

ನ್ಯಾಯಾಲಯವು ತನಿಖೆಯ ಮೇಲೆ ನಿಗಾ ಇಡಲಿಲ್ಲ ಎಂದಿದ್ದರೆ ಜಿಲ್ಲಾಧಿಕಾರಿಯನ್ನು ಆರೋಪಿಯನ್ನಾಗಿ ಮಾಡುತ್ತಿರಲೇ ಇಲ್ಲ. ಡಿ ಸಿ ಬಂಧಿಸಿದ ಮೇಲೆ ದಾಳಿಯನ್ನು ಮಾಡುತ್ತೀರಿ. ಮೊದಲಿಗೆ ಅವರನ್ನು ಆರೋಪಿ ಮಾಡಲೇ ನೀವು ಸಿದ್ಧವಿರಲಿಲ್ಲ. ಅದಕ್ಕಾಗಿಯೇ ಎಡಿಜಿಪಿ ಅಸಮರ್ಥ ಎಂದು ಹೇಳಬೇಕಾಯಿತು. ಡಿ ಸಿಯನ್ನು ಆರೋಪಿಯನ್ನಾಗಿಯೂ ಮಾಡಿರಲಿಲ್ಲ. ಆರೋಪಿಯನ್ನಾಗಿ ಮಾಡಲು ಯಾವುದೇ ದಾಖಲೆ ಇಲ್ಲ ಎಂದು ನೀವು ಹೇಳುತ್ತಿರುವಾಗ ಜಿಲ್ಲಾಧಿಕಾರಿ ಮನೆಯ ಮೇಲೆ ಹೇಗೆ ದಾಳಿ ಮಾಡಿದಿರಿ? ಇದಕ್ಕಾಗಿ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ಅಧಿಕಾರಿಯು ಕ್ರಮಕೈಗೊಂಡಿಲ್ಲ ಮತ್ತು ಅವರಿಗೆ ಉಮೇದು ಇಲ್ಲ ಎಂದು ಹೇಳಲಾಗಿದೆ. ಯಾವ ಕಾರಣಕ್ಕಾಗಿ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆಯೇ ಅದರತ್ತ ಅದರ ಹೊಣೆಗಾರಿಕೆ ಹೊತ್ತಿರುವ ಅಧಿಕಾರಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದುಂಟು. ನ್ಯಾಯಾಲಯ ಈ ವಿಚಾರದಲ್ಲಿ ಮುಂದುವರಿಯುವುದಕ್ಕೆ ಮುನ್ನವೇ ನೀವು ಆ ಕೆಲಸ ಮಾಡಬಹುದಿತ್ತಲ್ಲ ಎಂದು ಎಸಿಬಿಯನ್ನು ಪ್ರಶ್ನಿಸಿದರು.