ಸುದ್ದಿಗಳು

ಸಿಜೆ ಪೀಠದಲ್ಲಿನ ಸಮಸ್ಯೆ ಕುರಿತು ಚರ್ಚಿಸಲು ಡಿ.11ಕ್ಕೆ ವಿಶೇಷ ಸಾಮಾನ್ಯ ಸಭೆ ಕರೆದ ಬೆಂಗಳೂರು ವಕೀಲರ ಸಂಘ

ಹೈಕೋರ್ಟ್‌ನ ಬೆಂಗಳೂರು ಪೀಠದಲ್ಲಿನ ರಿಜಿಸ್ಟ್ರಿಯ ಆಡಳಿತದಲ್ಲಿನ ಲೋಪಗಳು, ಪ್ರಕರಣಗಳ ಪಟ್ಟಿ ವಿಭಾಗದಲ್ಲಿ ಪಾರದರ್ಶಕತೆ ಮತ್ತಿತರರ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಎಎಬಿ ಹೇಳಿದೆ.

Bar & Bench

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರ ಕೋರ್ಟ್‌ ಹಾಲ್‌ 1ರಲ್ಲಿ ವಕೀಲರು ವಿಚಾರಣೆಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಂಗಳೂರು ವಕೀಲರು ಸಂಘವು ಡಿಸೆಂಬರ್‌ 11ರಂದು ಮಧ್ಯಾಹ್ನ 1.30ಕ್ಕೆ ವಿಶೇಷ ಸಾಮಾನ್ಯ ಸಭೆ ಆಯೋಜಿಸಿದೆ.

ವಕೀಲರ ಸಂಘದ ಬೈಲಾ 17ಎ ಅಡಿ ಹೈಕೋರ್ಟ್‌ ಘಟಕದ ಎಎಬಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಹೈಕೋರ್ಟ್‌ನ ಬೆಂಗಳೂರು ಪೀಠದಲ್ಲಿನ ರಿಜಿಸ್ಟ್ರಿಯ ಆಡಳಿತದಲ್ಲಿನ ಲೋಪಗಳು, ಪ್ರಕರಣಗಳ ಪಟ್ಟಿ ವಿಭಾಗದಲ್ಲಿ ಪಾರದರ್ಶಕತೆ ಕೊರತೆ ಮತ್ತಿತರರ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ.

ರಿಟ್‌ ಮೇಲ್ಮನವಿ ವಿಚಾರಣೆ, ಪ್ರಕರಣಗಳನ್ನು ನಿಗದಿಗೊಳಿಸುವುದು, ಮೆಮೊ ಸ್ವೀಕರಿಸುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಕೆಲವು ಪೀಠಗಳು ಸಮಯಪಾಲನೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಎಬಿ‌ ಕಳೆದ ಅಕ್ಟೋಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಹೊಸ ರಿಟ್‌ ಮೇಲ್ಮನವಿಗಳು ಮತ್ತು ಹಸಿರು ಪೀಠದಲ್ಲಿ ವಿಚಾರಣೆಗೆ ಬರಬೇಕಾದ ಪ್ರಕರಣಗಳ ಆಲಿಕೆ ನಡೆಯುತ್ತಿಲ್ಲ. ಕೆಲವು ಏಕಸದಸ್ಯ ಪೀಠಗಳು ಮಂದಗತಿಯ ವಿಚಾರಣೆ ಮೂಲಕ ಕೋರ್ಟ್‌ನ ಅಮೂಲ್ಯ ಸಮಯವನ್ನು ಹರಣ ಮಾಡುತ್ತಿವೆ. ಇದರಿಂದ ಕಕ್ಷಿದಾರರಿಗೆ ಸಿಗಬೇಕಾದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಸಲ್ಲಿಸಲಾಗುವ ಜ್ಞಾಪನಾ ಪತ್ರಗಳನ್ನು (ಮೆಮೊ) ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಕಚೇರಿ ಮತ್ತು ರಿಜಿಸ್ಟ್ರಿ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಎಷ್ಟೋ ಬಾರಿ 7–8 ಸಲ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿಲ್ಲ. ಇದರಿಂದ ವಕೀಲರು ಮತ್ತು ಸಹಾಯಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿತ್ತು.