ಸುದ್ದಿಗಳು

ಎಎಬಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಸ್ಪರ್ಧೆ, ಅಖಾಡದಲ್ಲಿ ಒಟ್ಟು 140 ಅಭ್ಯರ್ಥಿಗಳು

ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಪ್ರತಿನಿಧಿ ಸದಸ್ಯರ ಸ್ಥಾನಗಳ ಸಹಿತ ಒಟ್ಟು 32 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಮತದಾನ ನಡೆಯಲಿದೆ.

Bar & Bench

ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಯು ಫೆಬ್ರವರಿ 2ರಂದು ನಡೆಯಲಿದ್ದು ವಿವಿಧ ಪದಾಧಿಕಾರಿಗಳ ಹುದ್ದೆಗೆ ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದೆ.

ಇದರೊಂದಿಗೆ ಅಂತಿಮ ಕಣ ಚಿತ್ರಣ ಲಭ್ಯವಾಗಿದ್ದು, ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಪ್ರತಿನಿಧಿ ಸದಸ್ಯರ ಸ್ಥಾನಗಳ ಸಹಿತ ಒಟ್ಟು 32 ಸ್ಥಾನಗಳಿಗೆ 140 ಮಂದಿ ಸ್ಪರ್ಧೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 6, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 5 ಹಾಗೂ ಖಜಾಂಚಿ ಸ್ಥಾನಕ್ಕೆ 4 ಮಂದಿ ಸ್ಪರ್ಧಿಸಿದ್ದಾರೆ. ಈ ಪ್ರಮುಖ ಮೂರು ಸ್ಥಾನಗಳ ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 21 ಸಾವಿರ ವಕೀಲ ಮತದಾರರು ನಿರ್ಧರಿಸಲಿದ್ದಾರೆ.

ಇನ್ನು ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ಆಯಾ ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ.

ಬೆಂಗಳೂರು ವಕೀಲ ಸಂಘದ ಆಡಳಿತ ಮಂಡಳಿಗೆ ಹೈಕೋರ್ಟ್‌ ಘಟಕದಿಂದ 7 ಮಂದಿ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಬಾರಿ 7 ಸ್ಥಾನಕ್ಕೆ 27 ಮಂದಿ ಕಣದಲ್ಲಿದ್ದಾರೆ. ಸಿಟಿ ಸಿವಿಲ್‌ ಕೋರ್ಟ್‌ನ 12 ಸದಸ್ಯರು ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಇದಕ್ಕಾಗಿ 59 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮ್ಯಾಜಿಸ್ಟ್ರೇಟ್‌ ಮತ್ತು ಮೆಯೊ ಹಾಲ್‌ ಕೋರ್ಟ್‌ನಿಂದ ತಲಾ 5 ಸದಸ್ಯರು ಆಡಳಿತ ಮಂಡಳಿ ಪ್ರತಿನಿಧಿಸಲಿದ್ದು, ಇದಕ್ಕೆ ಕ್ರಮವಾಗಿ 20 ಮತ್ತು 19 ಮಂದಿ ಕಣದಲ್ಲಿದ್ದಾರೆ.

ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ವಕೀಲರಾದ ನಂಜಪ್ಪ ಕಾಳೇಗೌಡ, ಆರ್‌ ರಾಜಣ್ಣ ಮತ್ತು ಟಿ ಎ ರಾಜಶೇಖರ್‌ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಎಬಿ ಮಾಜಿ ಖಜಾಂಚಿ ಎಂ ಟಿ ಹರೀಶ್‌, ಮಾಜಿ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ಕೆ ಅಕ್ಕಿ ಮಂಜುನಾಥ್‌ ಗೌಡ, ಎಂ ಎಚ್‌ ಚಂದ್ರಶೇಖರ್‌ ಮತ್ತು ಎಚ್‌ ವಿ ಪ್ರವೀಣ್‌ ಗೌಡ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಖಜಾಂಚಿಯ ಹುದ್ದೆಯ ಮೇಲೆ ಸಿ ಎಸ್‌ ಗಿರೀಶ್‌ ಕುಮಾರ್‌, ಮುನಿಯಪ್ಪ ಸಿ ಆರ್‌ ಗೌಡ, ಟಿ ಸಿ ಸಂತೋಷ್‌ ಮತ್ತು ಎ ವೇದಮೂರ್ತಿ ಕಣ್ಣಿಟ್ಟಿದ್ದಾರೆ.

ಉನ್ನತಾಧಿಕಾರ ಸಮಿತಿಯು ಚುನಾವಣೆಯ ಮೇಲೆ ನಿಗಾ ಇರಿಸಿದ್ದು, ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದಾರೆ. ಹಿರಿಯ ವಕೀಲರಾದ ವಿಕ್ರಂ ಹುಯಿಲಗೋಳ, ಪಿ ಅನು ಚೆಂಗಪ್ಪ, ವಕೀಲರಾದ ಕೆಂಪಣ್ಣ ಮತ್ತು ಎಂ ಆರ್‌ ವೇಣುಗೋಪಾಲ್‌ ಅವರು ಚುನಾವಣಾಧಿಕಾರಿಗಳಾಗಿದ್ದಾರೆ.

ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಮತದಾನ

ಫೆಬ್ರವರಿ 2ರಂದು ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಭಾರಿ ಭದ್ರತೆಯೊಂದಿಗೆ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ, ಪೊಲೀಸ್‌, ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ವಕೀಲರು ಸೇರಿ ಸುಮಾರು 800 ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ ಎನ್‌ ಫಣೀಂದ್ರ ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.

“100 ಮಂದಿ ಟ್ರಾಫಿಕ್‌ ಪೊಲೀಸ್‌ ಸೇರಿ 500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು. ಬೂತ್‌ನಲ್ಲಿ ವಿವಿಧ ಇಲಾಖೆಯ 260-270 ಮಂದಿ ಕಾರ್ಯನಿರ್ವಹಿಸಲಿದ್ದಾರೆ. 65-70 ಮಂದಿ ರಾಜ್ಯ ಚುನಾವಣಾ ಆಯೋಗದ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. 100 ಮಂದಿ ಸ್ವಯಂಸೇವಕ ವಕೀಲರು ಉಪಸ್ಥಿತರಿರಲಿದ್ದು ಪೊಲೀಸರು, ವಕೀಲ ಮತದಾರರು ಇತರರಿಗೆ ಅಗತ್ಯ ನೆರವು ನೀಡಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಮತದಾರರನ್ನು ಹುಡುಕಿ ಅವರಿಗೆ ಮತದಾನದ ಸ್ಲಿಪ್‌ ಒದಗಿಸುವ ಸಂಬಂಧ ಬಯೋಮೆಟ್ರಿಕ್‌ ವ್ಯವಸ್ಥೆಯಲ್ಲಿ 80 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಸಿಟಿ ಸಿವಿಲ್‌ ಕೋರ್ಟ್‌ ಒಳಗೆ ಮತ್ತು ಹೊರಗೆ ಸಿಸಿಟಿವಿ ಅಳವಡಿಸಲಾಗುತ್ತಿದ್ದು, ಮೂರು ಡ್ರೋನ್‌ ಕ್ಯಾಮೆರಾಗಳು ನಿಗಾವಹಿಸಲಿವೆ. ಉನ್ನತಾಧಿಕಾರಿ ಸಮಿತಿಯ 10 ಮಂದಿ, ಕೋರ್ಟ್‌ ಸಿಬ್ಬಂದಿ ಸೇರಿ ಒಟ್ಟು ಸುಮಾರು 800 ಮಂದಿ ಚುನಾವಣಾ ಕರ್ತವ್ಯದಲ್ಲಿರಲಿದ್ದಾರೆ. ಸರ್ಕಾರಿ ಕಲಾ ಕಾಲೇಜಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ” ಎಂದು ಹಿರಿಯ ವಕೀಲರೂ ಆದ ಫಣೀಂದ್ರ ತಿಳಿಸಿದ್ದಾರೆ.