ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಹಿರಿಯ ವಕೀಲ ಕೆ ಎನ್ ಪುಟ್ಟೇಗೌಡ ಬುಧವಾರ ಬೆಳಗಿನ ಜಾವ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು (ಇಬ್ಬರೂ ವಕೀಲರು) ಅಗಲಿದ್ದಾರೆ.
ಪುಟ್ಟೇಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಬೆಳ್ಳೂರು ಹೋಬಳಿಯ ಕಂಚನಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ್ದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಮತ್ತು ಕಾನೂನು ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದರು.
ಬಿ ಎಂ ದಯಾನಂದ ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಪ್ರವೇಶಿಸಿದ್ದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪರ ಹೈಕೋರ್ಟ್ ವಕೀಲರಾಗಿ ಮೂರೂವರೆ ದಶಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಬಿಬಿಎಂಪಿಯ ನೂರಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪರಭಾರೆ ಆಗದಂತೆ ಕಾನೂನು ಹೋರಾಟ ನಡೆಸಿ ತಡೆದ ಹಿರಿಮೆ ಹೊಂದಿದ್ದರು. ಅವರ ಶರೀರವನ್ನು ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು.