Karnataka HC and Live streaming 
ಸುದ್ದಿಗಳು

ಕೆಲ ದಿನದ ಮಟ್ಟಿಗೆ ಲೈವ್‌ ಸ್ಟ್ರೀಮಿಂಗ್‌ ನಿರ್ಬಂಧಿಸಲು ಸಿಜೆಗೆ ಎಎಬಿ ಮನವಿ; ನ್ಯಾ. ಶ್ರೀಶಾನಂದ ಹೇಳಿಕೆಗೆ ಆಕ್ಷೇಪ

ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವವರೆಗೆ ಅಂಥ ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಎಎಬಿ ಕೋರಿದೆ.

Bar & Bench

ಮುಸ್ಲಿಮರು ಮತ್ತು ಮಹಿಳಾ ವಕೀಲರೊಬ್ಬರ ಬಗ್ಗೆ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಬೆಂಗಳೂರಿನ ವಕೀಲರ ಸಂಘವು (ಎಎಬಿ) ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ದಿನಗಳವರೆಗೆ ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿದೆ.

ಇತ್ತೀಚೆಗೆ ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ವಿಚಾರಣೆಯ ವೇಳೆ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ವಿವಾದಾತ್ಮಕ ಅಭಿಪ್ರಾಯವು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ. ನ್ಯಾ. ಶ್ರೀಶಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಗಂಭೀರ ವಿವಾದ ಸೃಷ್ಟಿಸಿದ್ದು, ನ್ಯಾಯಮೂರ್ತಿಗಳ ಹೇಳಿಕೆಯು ವೈರಲ್‌ ಆಗಿದೆ. ಇದರಿಂದ ವಕೀಲ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಹಿರಿ-ಕಿರಿಯರೆನ್ನದೇ ಎಲ್ಲಾ ವಕೀಲರ ಭಾವನೆಗಳಿಗೂ ನೋವುಂಟಾಗಿದೆ. ಇಂಥ ಹೇಳಿಕೆಗಳಿಗೆ ವಕೀಲರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಕಾರ್ಯದರ್ಶಿ ಟಿ ಜಿ ರವಿ ಮತ್ತು ಖಜಾಂಚಿ ಎಂ ಟಿ ಹರೀಶ್‌ ಅವರು ಸಹಿ ಮಾಡಿರುವ ಪತ್ರದಲ್ಲಿ ವಿವರಿಸಲಾಗಿದೆ.

ನ್ಯಾ. ಶ್ರೀಶಾನಂದ ಅವರು ಮಹಿಳಾ ವಕೀಲೆಯೊಬ್ಬರನ್ನು ಕುರಿತು ಈಚೆಗೆ ನೀಡಿರುವ ಹೇಳಿಕೆಯು ರಾಷ್ಟ್ರದ ಗಮನ ಸೆಳೆದಿದ್ದು, ಇದರಿಂದ ವಕೀಲರು ಅದರಲ್ಲೂ ಮಹಿಳಾ ವಕೀಲರನ್ನು ನ್ಯಾಯಮೂರ್ತಿಗಳು ನಡೆಸಿಕೊಳ್ಳುತ್ತಿರುವ ರೀತಿಯ ವಿಸ್ತೃತ ವಿಷಯವನ್ನು ಮುನ್ನೆಲೆಗೆ ತಂದಿದೆ. ಹೀಗಾಗಿ, ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸುವಂತಹ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವವರೆಗೆ ಅಂಥ ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಲಿದ್ದು, ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳೆಡೆಗೆ ಇರುವ ಭಾವನೆಗೆ ಧಕ್ಕೆಯಾಗಲಿದೆ. ಈ ಕುರಿತು ತುರ್ತಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ಹೇಳಲಾಗಿದೆ.

ನ್ಯಾಯಮೂರ್ತಿ ಶ್ರೀಶಾನಂದ ಅವರು ಉತ್ತಮ ತೀರ್ಪುಗಳನ್ನು ನೀಡಿದ್ದು, ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ನ್ಯಾಯಮೂರ್ತಿಗಳ ಆಕ್ಷೇಪಾರ್ಹವಾದ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೂ ಅಪಚಾರ ಉಂಟಾಗುತ್ತಿದೆ. ಕೆಲವು ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ ಎಂದು ಎಎಬಿ ಹೇಳಿದೆ.