ಸುದ್ದಿಗಳು

ವಿಭಾಗೀಯ ಪೀಠದೆದುರು ರಿಟ್ ಅರ್ಜಿಗಳ ಪಟ್ಟಿ: ಅಧಿಸೂಚನೆ ಕೈಬಿಡುವಂತೆ ಕರ್ನಾಟಕ ಹೈಕೋರ್ಟ್ ಸಿಜೆಗೆ ಎಎಬಿ ಮನವಿ

Bar & Bench

ಯಾವುದೇ ಕಾನೂನು, ನಿಯಮ ಮತ್ತು ನಿಯಂತ್ರಣದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಎಲ್ಲಾ ರಿಟ್ ಅರ್ಜಿಗಳನ್ನು ವಿಭಾಗೀಯ ಪೀಠದ ಮುಂದೆ ಪಟ್ಟಿ ಮಾಡಲು ನಿರ್ದೇಶಿಸಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಅಧಿಸೂಚನೆಯನ್ನು ಕೈಬಿಡುವಂತೆ ಬೆಂಗಳೂರು ವಕೀಲರ ಸಂಘ (ಎಎಬಿ) ಕೋರಿದೆ.

ಈ ಸಂಬಂಧ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಂಘದ ಅಧ್ಯಕ್ಷ ಎ ಪಿ ರಂಗನಾಥ ಪತ್ರ ಬರೆದಿದ್ದಾರೆ. ನಿರ್ಧಾರದ ಸಿಂಧುತ್ವ, ಅದರ ಸಮಯ ಹಾಗೂ ಅದನ್ನು ಹೊರಡಿಸಿದ ರೀತಿ ವಕೀಲ ಸಮುದಾಯದ ಸದಸ್ಯರು, ಮಾಧ್ಯಮಗಳು ಹಾಗೂ ದಾವೆದಾರರ ನಡುವೆ ದೊಡ್ಡ ಚರ್ಚೆಯ ವಿಷಯವಾಗಿದೆ. ಅಧಿಸೂಚನೆ ಹೊರಡಿಸಿದ ನಿರ್ಧಾರ ತಪ್ಪಾಗಿದ್ದು ನ್ಯಾಯದಾನ ಅಥವಾ ವಕೀಲಸಮೂಹದ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂಬ ಅಭಿಪ್ರಾಯ ನ್ಯಾಯವಾದಿ ವರ್ಗದಲ್ಲಿದೆ ಎಂದು ಸಂಘ ಪತ್ರದಲ್ಲಿ ತಿಳಿಸಿದೆ.

ದೇಶದ ಕೆಲವು ಉನ್ನತ ಕಾನೂನು ಪಂಡಿತರು ವಾದ ಮಂಡಿಸುತ್ತಿರುವ ಕರ್ನಾಟಕ ಪೊಲೀಸ್ ಕಾಯಿದೆಯ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಬಾಕಿ ಇದ್ದು ಈ ಸಂದರ್ಭದಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ. ಅರೆ ವಿಚಾರಣೆಗೊಂಡ ಇಂತಹ ಪ್ರಕರಣಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಪೀಠದ ಎದುರು ಪಟ್ಟಿ ಮಾಡುತ್ತಿರುವುದು ವಕೀಲ ಸಮುದಾಯಕ್ಕೆ ಸರಿ ಕಾಣುತ್ತಿಲ್ಲ. ಅಲ್ಲದೆ ಇಂತಹ ಸೂಕ್ಷ್ಮವಾದ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದೆದುರು ಪಟ್ಟಿ ಮಾಡುತ್ತಿರುವುದು ದೊಡ್ಡ ಚರ್ಚೆಗೆ ಒಳಗಾಗಬೇಕಾದ ವಿಚಾರವಾಗಿದೆ ಎಂದು ಸಂಘ ವಿವರಿಸಿದೆ.

ಆಡಳಿತಾತ್ಮಕ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿವಿಧ ಕಾನೂನು ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಮನವಿ ತಿಳಿಸಿದ್ದು ಅವುಗಳಲ್ಲಿ ಕೆಲವನ್ನು ಅದು ಪಟ್ಟಿ ಮಾಡಿದೆ.

  1. ಏಕ ಸದಸ್ಯ ಪೀಠ ನ್ಯಾಯಾಂಗ ಆದೇಶದ ಮೂಲಕ 'ಅರೆ ವಿಚಾರಣೆಗೆ ಒಳಗಾದ ಪ್ರಕರಣ' ಎಂದು ಆದೇಶಿಸಿದಾಗ ಮುಖ್ಯ ನ್ಯಾಯಾಧೀಶರು ಆಡಳಿತಾತ್ಮಕ ಆದೇಶದ ಮೂಲಕ ವಿಭಾಗೀಯ ಪೀಠದ ಮುಂದೆ ಪೋಸ್ಟ್ ಪಟ್ಟಿ ಮಾಡಬಹುದೆ?

  2. ಕರ್ನಾಟಕ ಹೈಕೋರ್ಟ್ ಕಾಯಿದೆಯಡಿಯಲ್ಲಿ ಶಾಸನಬದ್ಧವಾಗಿ ಒದಗಿಸಲಾದ ಮೇಲ್ಮನವಿ ಹಕ್ಕನ್ನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ತೆಗೆದುಹಾಕಬಹುದೇ?

  3. ಶಾಸನಗಳು ಮತ್ತು ನಿಯಮಗಳ ಅಡಿಯಲ್ಲಿ ಏಕ ಸದಸ್ಯ ಪೀಠಕ್ಕೆ 226ನೇ ವಿಧಿಯಡಿ ನೀಡಲಾದ ಮೂಲ ರಿಟ್ ಅಧಿಕಾರವನ್ನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ತೆಗೆದುಹಾಕಬಹುದೇ?

  4. ಇಂತಹ ಮಹತ್ವದ ನಿರ್ಧಾರವನ್ನು ಹೈಕೋರ್ಟ್‌ನ (ಪೂರ್ಣ ನ್ಯಾಯಾಲಯ) ಮುಂದೆ ಏಕೆ ತರಲಿಲ್ಲ?

  5. ಏಕ ಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವ ಮತ್ತು ದೇಶದ ಅನೇಕ ಹಿರಿಯ ನ್ಯಾಯವಾದಿಗಳು ವಾದ ಮಂಡಿಸುತ್ತಿರುವ ಕರ್ನಾಟಕ ಪೊಲೀಸ್‌ ಕಾಯಿದೆಯ ತಿದ್ದುಪಡಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ಪ್ರಕರಣವನ್ನು ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಸ್ವತಃ ವಿಚಾರಣೆಗೆ ಒಳಪಡಿಸುವುದು ಸರಿಯೇ?

ಈ ವಿಚಾರಗಳು ಅನಗತ್ಯ ಚರ್ಚೆಗೆ ಕಾರಣವಾಗಿದ್ದು ನ್ಯಾಯ ದಾನದ ಸಮಾನ ಪಾಲುದಾರರಾಗಿ ಈ ಮಹಾನ್ ಸಂಸ್ಥೆ ಹಾನಿಗೊಳಗಾಗದೆ ಇರುವಂತೆ ನೋಡಿಕೊಳ್ಳುವುದು ನಮ್ಮ ಬದ್ಧ ಕರ್ತವ್ಯ. ಈ ಬಹುದೊಡ್ಡ ಸಾರ್ವಜನಿಕ ಹಿತಾಸಕ್ತಿಯೇ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯುವಂತೆ, ಹಿಂದಿನ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮತ್ತು ಹೇಬಿಯಸ್ ಕಾರ್ಪಸ್, ಪಿಐಎಲ್ ಮತ್ತು ಹಸಿರು ಪೀಠದ ಪ್ರಕರಣಗಳು ಸೇರಿದಂತೆ ಎಲ್ಲಾ ರಿಟ್ ಅರ್ಜಿಗಳನ್ನು ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳೇ ಮುಂದುವರೆಸುವಂತೆ ನೋಡಿಕೊಳ್ಳಬೇಕು ಎಂದು ಸಂಘ ಮುಖ್ಯ ನ್ಯಾಯಮೂರ್ತಿಗಳನ್ನು ವಿನಂತಿಸಿದೆ.