ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಕೆಎಟಿ) ನ್ಯಾಯಾಲಯದ ವಿಚಾರಣೆಗಳನ್ನು ನ್ಯಾಯಾಂಗ ರೀತಿಯಲ್ಲಿ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿರುವ ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಕೆಎಟಿ ಅಧ್ಯಕ್ಷ ಹರ್ಷ ಗುಪ್ತ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷ ವಿವೇಕ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ ಎಸ್ ಗಿರೀಶ್ ಕುಮಾರ್ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಅವರು ಸಹಿ ಮಾಡಿರುವ ಎರಡು ಪುಟಗಳ ಪತ್ರದಲ್ಲಿ ಹರ್ಷ ಗುಪ್ತ ಆಡಳಿತದ ಕಾರ್ಯವೈಖರಿ ವಿರುದ್ಧ 10ಕ್ಕೂ ಹೆಚ್ಚು ಅಂಶಗಳ ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ.
ಹರ್ಷ ಗುಪ್ತ ಅವರು ನ್ಯಾಯ ನೀಡುವ ಬದಲು ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಏಕೈಕ ಉದ್ದೇಶದಿಂದ ಪ್ರಕರಣಗಳನ್ನು ವಜಾಗೊಳಿಸುತ್ತಿದ್ದಾರೆ. ಇದರಿಂದ, ವಕೀಲರು ಮತ್ತು ಕಕ್ಷಿಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಅಧ್ಯಕ್ಷ ಹರ್ಷ ಗುಪ್ತ ಅವರು ಮೇಲ್ಮನವಿಗಳನ್ನು ಸ್ವೀಕರಿಸುವುದಿಲ್ಲ. ದಾಖಲೆಗಳನ್ನು ತರಲು ಸೂಚಿಸದೇ ನಿರ್ಧರಿಸುತ್ತಾರೆ. ಪ್ರಕರಣದ ಪ್ರವೇಶದ ಹಂತದಲ್ಲಿಯೇ ವಿಷಯಗಳನ್ನು ವಜಾಗೊಳಿಸುವ ಜಾಯಮಾನ ರೂಢಿಸಿಕೊಂಡಿದ್ದಾರೆ. ಇದು ದಾವೆದಾರರಿಗೆ ದೊಡ್ಡ ಅನ್ಯಾಯವನ್ನುಂಟು ಮಾಡುತ್ತಿದೆ.
ಆರೋಗ್ಯ ಅಥವಾ ಇತರೆ ಕಾರಣಗಳನ್ನು ನೀಡಿದರೂ ವಕೀಲರ ಮನವಿಗಳನ್ನು ನಿರ್ಲಕ್ಷಿಸಿ ಮೊದಲ ಸುತ್ತಿನಲ್ಲಿ ಪಟ್ಟಿ ಮಾಡಲಾದ ಎಲ್ಲಾ ವಿಷಯಗಳನ್ನು ವಾಡಿಕೆಯಂತೆ ಅಂಗೀಕರಿಸಲಾಗುತ್ತದೆ.
ವಿಚಾರಣೆಯನ್ನು ಮುಂದೂಡದೆ ವಕೀಲರನ್ನು ಸಂಜೆ 6:30ರವರೆಗೆ ಕಾಯುವಂತೆ ಒತ್ತಾಯಿಸುತ್ತಾರೆ. ಮುಂದೂಡಿದರೂ 1 ಅಥವಾ 2 ದಿನಗಳವರೆಗೆ ಮಾತ್ರವೇ ಮುದ್ದತು ನೀಡುತ್ತಾರೆ.
ದಿನಕ್ಕೆ ಸುಮಾರು 300 ರಿಂದ 400 ಪ್ರಕರಣಗಳನ್ನು ಪೋಸ್ಟ್ ಮಾಡಿಸುತ್ತಿದ್ದಾರೆ. ಆದರೂ, ಅವರಿಗೆ ದಿನವೊಂದಕ್ಕೆ 30ರಿಂದ 40ಕ್ಕಿಂತಲೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ವಿಷಯಗಳನ್ನು ಅಧಿಕೃತವಾಗಿ ಬೆಳಿಗ್ಗೆ 11 ಗಂಟೆಗೆ ಪೋಸ್ಟ್ ಮಾಡಲಾಗಿದ್ದರೂ, ಸಮಯಕ್ಕೆ ಸರಿಯಾಗಿ ಪೀಠಾಸೀನರಾಗುವುದಿಲ್ಲ. ಬದಲಾಗಿ ಮಧ್ಯಾಹ್ನ 2.30ಕ್ಕೆ ವಿಚಾರಣೆ ಪ್ರಾರಂಭವಾಗುತ್ತದೆ. ಅದೂ ವಾರದಲ್ಲಿ ಕೇವಲ ಮಂಗಳವಾರ ಮತ್ತು ಗುರುವಾರ ಮಾತ್ರ.
ಅನಿವಾರ್ಯ ಕಾರಣಗಳಿಂದ ವಕೀಲರು ಗೈರುಹಾಜರಾದರೆ, ವಕೀಲರ ಮನವಿ ಆಲಿಸದೆಯೇ ವಿಷಯವನ್ನು ಸ್ವಯಂಪ್ರೇರಿತವಾಗಿ ಅಂತಿಮ ಆದೇಶಗಳಿಗೆ ಪೋಸ್ಟ್ ಮಾಡಲಾಗುತ್ತದೆ.
ಸುಮಾರು 4 ತಿಂಗಳುಗಳಿಗಿಂತ ಹೆಚ್ಚು ಕಾಲ ಆದೇಶಗಳಿಗಾಗಿ ವಿಷಯಗಳನ್ನು ಕಾಯ್ದಿರಿಸಿದ್ದರೂ ಆದೇಶಗಳನ್ನು ಉಚ್ಚರಿಸುವುದಿಲ್ಲ.
ಪೀಠದ ಮುಂದೆ ಹಾಜರಾಗುವ ವಕೀಲರಿಗೆ ತಮ್ಮ ವಾದ ಮತ್ತು ವಿಷಯಗಳ ಪರಿಣಾಮಕಾರಿ ವಾದ ಮಂಡನೆಗೆ ನ್ಯಾಯಯುತವಾದ ಅವಕಾಶ ನೀಡುವುದನ್ನು ನಿರಾಕರಿಸಲಾಗುತ್ತಿದೆ. ಎರಡು ಸಾಲಿನ ಕ್ಲುಪ್ತ ವಾದವನ್ನು ಮಾತ್ರ ಮಾಡಿ ಎಂದು ಒತ್ತಾಯಿಸುತ್ತಾರೆ.
ವಿಚಾರಣೆಯ ದಿನಾಂಕಗಳನ್ನು ಮುಂಚಿತವಾಗಿ ನಿಗದಿಪಡಿಸುವುದು, ಆಯಾ ವಕೀಲರು ಹಾಗೂ ಪಕ್ಷಗಾರರಿಗೆ ತಿಳಿಸದೆ ಪ್ರಕರಣಗಳನ್ನು ಬೇರೆ ಬೇರೆ ಪೀಠಗಳಿಗೆ ವರ್ಗಾಯಿಸುವುದು ಮತ್ತು ನಂತರ ವಿಚಾರಣೆ ನಡೆಸದ ಕಾರಣ ಪ್ರಕರಣಗಳನ್ನು ವಜಾಗೊಳಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಕೆಳ ನ್ಯಾಯಾಲಯದ ದಾಖಲೆಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳ ತೀರ್ಪುಗಳನ್ನು ಪಾಲಿಸುವುದಿಲ್ಲ. ಅವುಗಳ ಪೂರ್ವನಿದರ್ಶನ, ನಿರ್ದೇಶನಗಳು ಮತ್ತು ಆಜ್ಞೆಗಳನ್ನು ಉಲ್ಲಂಘಿಸುವ ಆದೇಶಗಳನ್ನು ಹೊರಡಿಸುತ್ತಾರೆ.
ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ನಡೆಯಬೇಕಿದ್ದ ಎಲ್ಲಾ ಶಿಬಿರಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ಉಭಯ ಪಕ್ಷಗಾರರು ಮತ್ತು ದಾವೆದಾರರು ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಅವರಿಗೆ ಭಾರಿ ಅನಾನುಕೂಲ ಮಾತ್ರವಲ್ಲದೆ ಅನಗತ್ಯ ಹೊರೆಯನ್ನೂ ಉಂಟು ಮಾಡುತ್ತಿದೆ.