AAB 
ಸುದ್ದಿಗಳು

ಎಎಬಿ ವಿಶೇಷ ಸಭೆ ನಿರ್ಣಯ ಅಪರಿಪೂರ್ಣ: ಬಿಸಿಐ ಸಹ ಅಧ್ಯಕ್ಷ ಸದಾಶಿವ ರೆಡ್ಡಿ, ಎಎಬಿ ಮಾಜಿ ಅಧ್ಯಕ್ಷ ರಂಗನಾಥ್‌ ಆಕ್ಷೇಪ

ಠರಾವಿನ ಅನುಸಾರ ಸಭೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯ ಮತ್ತು ಒಮ್ಮತದ ನಿರ್ಧಾರಗಳನ್ನು 2025ರ ಮಾರ್ಚ್‌ 24ರಂದು ಹೊರಡಿಸಲಾಗಿರುವ ನಿರ್ಣಯದಲ್ಲಿ ಕಾಣಿಸಿಲ್ಲ ಎಂದು ಆಕ್ಷೇಪಿಸಲಾಗಿದೆ.

Bar & Bench

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮ ಅವರ ಮನೆಯಲ್ಲಿ ಕೋಟ್ಯಂತರ ಮೊತ್ತದ ನಗದು ದೊರೆತಿತ್ತು ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಬೆಂಗಳೂರು ವಕೀಲರ ಸಂಘದ (ಎಎಬಿ) ಸರ್ವಸದಸ್ಯರ ವಿಶೇಷ ತುರ್ತು ಸಭೆಯ ನಿರ್ಣಯಗಳು ಪರಿಪೂರ್ಣವಾಗಿಲ್ಲ ಎಂದು ಭಾರತೀಯ ವಕೀಲರ ಪರಿಷತ್‌ನ ಸಹ ಅಧ್ಯಕ್ಷ ಸದಾಶಿವ ರೆಡ್ಡಿ ಮತ್ತು ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಸೇರಿದಂತೆ ಹಲವು ಹಿರಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಹಲವು ವಕೀಲರು ಹಾಗೂ ಸಂಘದ ಪದಾಧಿಕಾರಿಗಳು ಸಹಿ ಮಾಡಿರುವ ನಾಲ್ಕು ಪುಟಗಳ ಹೇಳಿಕೆಯಲ್ಲಿ ಠರಾವಿನ ಅನುಸಾರ ಸಭೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯ ಮತ್ತು ಒಮ್ಮತದ ನಿರ್ಧಾರಗಳನ್ನು 2025ರ ಮಾರ್ಚ್‌ 24ರಂದು ಹೊರಡಿಸಲಾಗಿರುವ ನಿರ್ಣಯದಲ್ಲಿ ದಾಖಲಿಸಿಲ್ಲ. ಹಾಲಿ ಅಧ್ಯಕ್ಷರು ಕೂಡಲೇ ಬಿಡುಗಡೆ ಮಾಡಿರುವ ಈ ನಿರ್ಣಯಗಳನ್ನು ವಾಪಸು ಪಡೆದು ಪುನರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಸುಪ್ರೀಂ ಕೋರ್ಟ್‌ ನ್ಯಾ. ವರ್ಮಾ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಕ್ಕೆ ಸಭೆಯು ಸರ್ವಾನುಮತದ ಬೆಂಬಲ ಸೂಚಿಸಿದ್ದು, ಸತ್ಯವನ್ನು ಹೊರಗೆಳೆಯಲು ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಲು ನಿರ್ಧರಿಸಲಾಗಿತ್ತು. ಆದರೆ, ವಿವೇಕ್‌ ಸುಬ್ಬಾರೆಡ್ಡಿ ಹಂಚಿಕೆ ಮಾಡಿರುವ ನಿರ್ಣಯಗಳಲ್ಲಿ ಈ ಅಂಶಗಳು ಇಲ್ಲ ಎಂದು ಆಕ್ಷೇಪಿಸಲಾಗಿದೆ.

ಭವಿಷ್ಯದಲ್ಲಿ ನಡೆಸಲಾಗುವ ಸಭೆಯ ಪ್ರಕ್ರಿಯೆಗಳನ್ನು ವಾಸ್ತವಿಕವಾಗಿ ದಾಖಲಿಸಬೇಕು. ಹಾಲಿ ನಿರ್ಣಯವನ್ನು ಪರಿಶೀಲಿಸಬೇಕು. ಈಗ ಬಿಡುಗಡೆ ಮಾಡಿರುವ ನಿರ್ಣಯವನ್ನು ಹಿಂಪಡೆದು, ಹೊಸದಾಗಿ ನಿರ್ಣಯವನ್ನು ದಾಖಲಿಸಬೇಕು. ಎಎಬಿ ಪ್ರಕ್ರಿಯೆಗಳು ಪಾರದರ್ಶಕ, ನಿಷ್ಪಕ್ಷಪಾತ ಮತ್ತು ವಕೀಲ ಸಮುದಾಯದ ಹಿತಾಸಕ್ತಿಗೆ ಅನುಗುಣವಾಗಿರುವುದನ್ನು ತಾವು ಖಾತರಿಪಡಿಸುತ್ತೀರೆಂಬ ನಂಬಿಕೆ ಹೊಂದಿರುವುದಾಗಿ ಪತ್ರದಲ್ಲಿ ವಿವರಿಸಲಾಗಿದೆ.