ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾಡಿರುವ ಶಿಫಾರಸ್ಸು ವಿರೋಧಿಸಿ ಬುಧವಾರ ಹೈಕೋರ್ಟ್‌ನ ಕಲಾಪವನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲ ನಿರ್ಧಾರ ಕೈಗೊಳ್ಳಲಾಗಿದೆ.
ವಕೀಲರ ಕಳಕಳಿಗೆ ಸ್ಪಂದಿಸದೇ ಮತ್ತು ಅಪಾರದರ್ಶಕತೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಎಎಬಿ ಆಕ್ಷೇಪಿಸಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಕರ್ನಾಟಕದ ನ್ಯಾಯಾಂಗವನ್ನು ಪದೇಪದೇ ಉಪೇಕ್ಷೆಯಿಂದ ಕಾಣುತ್ತಿರುವುದಕ್ಕೆ ಆಳವಾಗಿ ಮಡುಗಟ್ಟಿರುವ ಭಾವನೆ ನಿರ್ಧಾರದ ಹಿಂದೆ ಕೆಲಸ ಮಾಡಿದೆ ಎಂದು ಆಕ್ಷೇಪಿಸಲಾಗಿದೆ.
ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ವಕೀಲರ ಸಂಘಗಳು ಒಟ್ಟಾಗಿ ಈ ನಿಲುವಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಲು ನೆರವಾಗುವಂತೆ ಎಎಬಿಯು ಕೋರಿದೆ. ಯೋಜಿತ ಕಲಾಪ ಬಹಿಷ್ಕಾರದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಿ ಮಾಡಿರುವ ಪ್ರಕರಣಗಳನ್ನು ಗುರುವಾರ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಎಎಬಿ ಒತ್ತಾಯಿಸಿದೆ.