Karnataka High Court, Lawyers 
ಸುದ್ದಿಗಳು

ಪದಾಧಿಕಾರಿ ನಿಂದನೆ ಪ್ರಕರಣ: ಐವರು ವಕೀಲರ ಅಮಾನತು ನಿರ್ಣಯ ಹಿಂಪಡೆದ ಎಎಬಿ; ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಎಎಬಿಯು 6.12.2025ರಂದು ವಕೀಲರಾದ ಎಂ ಮುನಿಯಪ್ಪ, ರಘು ಕುಮಾರ್‌, ತೀರ್ಥ, ಶ್ರೀನಿವಾಸ್‌ ಜೆ ಎಂ ಮತ್ತು ಟಿ ಎಲ್‌ ನಾಗರಾಜು ಅವರನ್ನು ಅಮಾನತುಗೊಳಿಸಿದ್ದ ನಿರ್ಣಯವನ್ನು ಹಿಂಪಡೆದಿದೆ.

Bar & Bench

ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಘಟಕದ ಪದಾಧಿಕಾರಿಗೆ ಅಗೌರವ ತೋರಿದ ಆರೋಪದ ಮೇಲೆ ಐವರು ವಕೀಲರನ್ನು ಅಮಾನತುಗೊಳಿಸಿ ಹೊರಡಿಸಿದ್ದ ನಿರ್ಣಯವನ್ನು ಹಿಂಪಡೆಯಲಾಗಿದೆ ಎಂದು ಬೆಂಗಳೂರು ವಕೀಲ ಸಂಘವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿರುವುದರಿಂದ ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿದೆ.

ಎಎಬಿಯು 6.12.2025ರಂದು ಹೊರಡಿಸಿದ್ದ ಅಮಾನತು ನಿರ್ಣಯ ರದ್ದತಿ ಕೋರಿ ವಕೀಲರಾದ ಎಂ ಮುನಿಯಪ್ಪ, ರಘು ಕುಮಾರ್‌, ತೀರ್ಥ, ಶ್ರೀನಿವಾಸ್‌ ಜೆ ಎಂ ಮತ್ತು ಟಿ ಎಲ್‌ ನಾಗರಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ.

ಅರ್ಜಿದಾರರನ್ನು ಅಮಾನತು ಮಾಡಿರುವ ಆದೇಶವನ್ನು ಎಎಬಿಯು ಹಿಂಪಡೆದಿರುವುದರಿಂದ ಅವರ ಸದಸ್ಯತ್ವಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಜಾತಿ ನಿಂದನೆ ಆರೋಪ ಮಾಡಿರುವ ವಕೀಲ ಅಂಜನ್‌ ಗೌಡ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿದಾರರು ಈ ಮನವಿಯನ್ನು ಕೆಎಸ್‌ಬಿಸಿಗೆ ಸಲ್ಲಿಸಬಹುದಾಗಿದ್ದು, ಅದು ಕಾನೂನಿನ ಅನ್ವಯ ಕ್ರಮಕೈಗೊಳ್ಳಬೇಕು. ಜಾತಿ ನಿಂದನೆ ಕುರಿತು ದಾಖಲಾಗಿರುವ ಪ್ರಕರಣದ ಕುರಿತು ಸಕ್ಷಮ ಪ್ರಾಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆಯ ವೇಳೆ ಪೀಠವು “ಪ್ರಕರಣದ ಕುರಿತು ಸಂಧಾನ ಏನಾಯಿತು? ಅರ್ಜಿದಾರರ ಅಮಾನತು ನಿರ್ಣಯ ಹಿಂಪಡೆಯವುದರಿಂದ ಅರ್ಜಿದಾರರ ಸದಸ್ಯತ್ವ ಪುನರ್‌ ಸ್ಥಾಪಿತವಾಗಲಿದೆ ಅಲ್ಲವೇ?” ಎಂದಿತು.

ಆಗ ಎಎಬಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್ ಅವರು “ಅರ್ಜಿದಾರ ವಕೀಲರನ್ನು ಅಮಾನತು ಮಾಡಿರುವ ನಿರ್ಣಯವನ್ನು ಎಎಬಿ ಹಿಂಪಡೆಯಲಿದೆ. ಉಳಿದ ಕೋರಿಕೆ ಬಗೆಹರಿಸಲು ಕಾಲಾವಕಾಶ ಬೇಕು. ಈಗ ಅದರ ತುರ್ತು ಏನಿಲ್ಲ. ತನಿಖೆ ಬಾಕಿ ಉಳಿಸಿ, ಅರ್ಜಿದಾರರನ್ನು ಅಮಾನತುಗೊಳಿಸಲಾಗಿತ್ತು. ಅಗತ್ಯಬಿದ್ದರೆ ತನಿಖೆ ನಡೆಸುತ್ತೇವೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಆರೋಪ ಮಾಡಿರುವ ಪ್ರಕರಣಕ್ಕೆ ಸಮನ್ವಯ ಪೀಠ ತಡೆ ನೀಡಿದೆ. ವಕೀಲ ಅಂಜನ್‌ ಗೌಡ ಅವರು ಜಾತಿ ನಿಂದನೆ ಮಾಡಿರುವ ಸಂಬಂಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದಿರುವ ಕೋರಿಕೆಗೆ ಸಂಬಂಧಿಸಿದಂತೆ ಶಿಸ್ತು ಕಾಪಾಡಲು ಏನೇನು ಮಾಡಬೇಕು ಅದೆಲ್ಲವನ್ನೂ ಮಾಡಲಾಗುವುದು. ದುರ್ನಡತೆಗೆ ಸಂಬಂಧಿಸಿದಂತೆ ಅರ್ಜಿದಾರರು ಅಂಜನ್‌ ಗೌಡ ವಿರುದ್ದ ರಾಜ್ಯ ವಕೀಲರ ಪರಿಷತ್‌ಗೆ ಮನವಿ ನೀಡಬಹುದು” ಎಂದರು.

“ಎಎಬಿ ಬೈಲಾ ನಿಯಮ 61ರ ಅಡಿ ನೋಟಿಸ್‌ ನೀಡದೇ ಅರ್ಜಿದಾರರನ್ನು ಅಮಾನತು ಮಾಡಲಾಗಿದೆ ಎಂಬುದು ಅವರ ವಾದ. ಈಗ ಅಮಾನತು ಆದೇಶ ಹಿಂಪಡೆಯಲಾಗಿದೆ. ಈ ಕುರಿತು ಮೆಮೊ ಸಲ್ಲಿಸಲಾಗುವುದು. ಬೇರೆ ಏನಿದೆ ಅದೆಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆ” ಎಂದು ನ್ಯಾಯಾಲಯಕ್ಕೆ ವಾಗ್ದಾನ ನೀಡಿದರು.

ಅರ್ಜಿದಾರರ ಪರವಾಗಿ ವಕೀಲ ಎಚ್‌ ಸಿ ಶಿವರಾಮು ಅವರು ಹಾಜರಿದ್ದರು.

Muniyappa M Vs State of Karnataka.pdf
Preview