High Court of Karnataka 
ಸುದ್ದಿಗಳು

ವಿದೇಶಿ ಕಂಪೆನಿಗಳಿಗೆ ಆಧಾರ್‌ ದತ್ತಾಂಶ ನಿರ್ವಹಣೆ ಗುತ್ತಿಗೆ: ಸುಪ್ರೀಂ ಕದ ತಟ್ಟಲು ಸೂಚಿಸಿದ ಹೈಕೋರ್ಟ್‌

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಮೂರು ವಿದೇಶಿ ಕಂಪೆನಿಗಳಿಗೆ ದತ್ತಾಂಶ ನಿರ್ವಹಣೆ ಮಾಡುವುದರ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಕೋರಲಾಗಿತ್ತು.

Bar & Bench

ಬಯೋಮೆಟ್ರಿಕ್ ಮತ್ತು ಆಧಾರ್ ವ್ಯವಸ್ಥೆಯಿಂದ ಸಂಗ್ರಹಣೆ ಮಾಡಲಾಗಿರುವ ದತ್ತಾಂಶದ ನಿರ್ವಹಣೆ ಗುತ್ತಿಗೆಯನ್ನು ಕೇಂದ್ರ ಸರ್ಕಾರವು ವಿದೇಶಿ ಕಂಪೆನಿಗಳಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ಸೂಚಿಸಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ಮನವಿ ವಿಲೇವಾರಿ ಮಾಡಿದೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಮೂರು ವಿದೇಶಿ ಕಂಪೆನಿಗಳಿಗೆ ದತ್ತಾಂಶ ನಿರ್ವಹಣೆ ಮಾಡುವುದರ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್‌ ಅವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿಯಲ್ಲಿ ಎತ್ತಲಾಗಿರುವ ಅಂಶಗಳ ಕುರಿತು ಸುಪ್ರಿಂ ಕೋರ್ಟ್ ಮುಂದೆ ಪರಿಹಾರ ಪಡೆಯಬಹುದು. ಅರ್ಜಿದಾರರು ಎತ್ತಿರುವ ವಾದಗಳನ್ನು ಮುಕ್ತವಾಗಿರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು “ಕೆಲ ಕಾಲ ವಾದಿಸಿ, ಸುಪ್ರೀಂ ಕೋರ್ಟ್‌ ಸೇರಿದಂತೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಪಡೆಯಲು ಸ್ವಾತಂತ್ರ್ಯ ಕಲ್ಪಿಸಬೇಕು. ಅರ್ಜಿ ಹಿಂಪಡೆಯಲು ಅನುಮತಿಸಬೇಕು” ಎಂದು ಕೋರಿದರು.

ಈಗಾಗಲೇ ಯುಐಡಿಎಐ ಸಂಗ್ರಹಿಸಿರುವ ದತ್ತಾಂಶವನ್ನು ಬಳಕೆ ಮಾಡದಂತೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು.