ಸುದ್ದಿಗಳು

'ಆಪ್ ಕಿ ಅದಾಲತ್' ಹೋಲುವ 'ಬಾಪ್ ಕಿ ಅದಾಲತ್': ರಜತ್ ಶರ್ಮಾ ವ್ಯಕ್ತಿತ್ವದ ಹಕ್ಕು ರಕ್ಷಿಸಿದ ದೆಹಲಿ ಹೈಕೋರ್ಟ್

ವ್ಯಕ್ತಿಯೊಬ್ಬ "ಜಂಡಿಯಾ ಟಿವಿ" ಮತ್ತು "ಬಾಪ್ ಕಿ ಅದಾಲತ್" ಎಂಬ ಹೆಸರನ್ನು ಬಳಸುತ್ತಿದ್ದ; ಇದು ಇಂಡಿಯಾ ಟಿವಿ ಮತ್ತು ಆಪ್ ಕಿ ಅದಾಲತ್ ವಾಣಿಜ್ಯ ಚಿಹ್ನೆಗಳ ಉಲ್ಲಂಘನೆ ಎಂದು ರಜತ್ ಶರ್ಮಾ ವಾದಿಸಿದ್ದರು.

Bar & Bench

ಸುದ್ದಿ ವಾಹಿನಿ ಇಂಡಿಯಾ ಟಿವಿಯ ವಾಣಿಜ್ಯ ಚಿಹ್ನೆ ಮತ್ತು ಪತ್ರಕರ್ತ ರಜತ್ ಶರ್ಮಾ ಮತ್ತು ಅವರ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ಕುರಿತ ಮೊಕದ್ದಮೆಗೆ ಸಂಬಂಧಿಸಿದಂತೆ ಈಚೆಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ʼಜಂಡಿಯಾ ಟಿವಿʼ ಮತ್ತು ʼಬಾಪ್ ಕಿ ಅದಾಲತ್ʼ ಹೆಸರು ಬಳಸದಂತೆ ರಾಜಕೀಯ ವಿಡಂಬನಕಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರಿಗೆ ನಿರ್ಬಂಧ ವಿಧಿಸಿದೆ  [ಇಂಡಿಪೆಂಡೆಂಟ್ ನ್ಯೂಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ರವೀಂದ್ರ ಕುಮಾರ್‌ ಚೌಧರಿ ಇನ್ನಿತರರ ನಡುವಣ ಪ್ರಕರಣ].

ವಾಣಿಜ್ಯ ಚಿಹ್ನೆ, ಲೋಗೊ, ವಾಣಿಜ್ಯ ಶೈಲಿ, ಡೊಮೇನ್‌ ನಾಮಧೇಯ, ಸಾಮಾಜಿಕ ಮಾಧ್ಯಮ ಪ್ರಕಟಣೆ, ಆಡಿಯೋ ವೀಡಿಯೊ ವಸ್ತುವಿಷಯ ಅಥವಾ ಇನ್ನಾವುದೇ ಸೇವೆಗಳಿಗೆ ಸಂಬಂಧಿಸಿದಂತೆ ರಜತ್ ಶರ್ಮಾ ಅವರ ಫೋಟೋ, ವೀಡಿಯೊಗಳು ಅಥವಾ ಹೆಸರನ್ನು ಪ್ರತಿವಾದಿ ರವೀಂದ್ರ ಕುಮಾರ್ ಚೌಧರಿ ಅವರು ಬಳಸುವಂತಿಲ್ಲ ಎಂದು ಮೇ 30 ರಂದು ನೀಡಿದ ಮಧ್ಯಂತರ ಆದೇಶದಲ್ಲಿ, ನ್ಯಾಯಮೂರ್ತಿ ಅನೀಶ್ ದಯಾಳ್ ಅವರು ತಿಳಸಿದ್ದಾರೆ.

ನಿಯಮ ಉಲ್ಲಂಘಿಸಿರುವ ವಸ್ತು ವಿಷಯವನ್ನು ಮತ್ತು ಸಾಮಾಜಿಕ ಮಾಧ್ಯಮ ಪ್ರಕಟಣೆಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಎಕ್ಸ್ (ಟ್ವಿಟರ್) ಸಂಸ್ಥೆಗಳಿಗೆ ಕೂಡ ನ್ಯಾಯಾಲಯ ಸೂಚಿಸಿದೆ.

ಇಂಡಿಯಾ ಟಿವಿ ಮತ್ತು ರಜತ್ ಶರ್ಮಾ ಅವರು 1990ರ ದಶಕದಿಂದಲೂ ನಡೆಸಿಕೊಂಡು ಬರುತ್ತಿರುವ ಸಂದರ್ಶನ ಕಾರ್ಯಕ್ರಮವಾದ "ಆಪ್ ಕಿ ಅದಾಲತ್"ನ್ನು ಹೋಲುವ ವಾಣಿಜ್ಯ ಚಿಹ್ನೆ ಇಲ್ಲವೇ ಲೋಗೊವನ್ನು ಚೌಧರಿ ಕಾನೂನುಬಾಹಿರವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.  

ವಾದ ಪುರಸ್ಕರಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಲು ಬೇಕಾದ ಮೇಲ್ನೋಟದ ವಾದ ಮಂಡಿಸಲಾಗಿದೆ ಎಂದು ತಿಳಿಸಿತು.