Delhi NCT
Delhi NCT 
ಸುದ್ದಿಗಳು

ಐಎಎಸ್‌, ಐಪಿಎಸ್ ಅಧಿಕಾರಿಗಳ ಆಡಳಿತಾತ್ಮಕ ನಿಯಂತ್ರಣ ಮೇಲ್ಮನವಿ ಶೀಘ್ರ ವಿಚಾರಣೆಗೆ ದೆಹಲಿ ಸರ್ಕಾರದ ಕೋರಿಕೆ

Bar & Bench

ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿರುವ ಐಎಎಸ್‌, ಐಪಿಎಸ್‌ ಮತ್ತು ಇತರೆ ಸೇವೆಗಳಲ್ಲಿರುವ ಅಧಿಕಾರಿಗಳ ಮೇಲೆ ಶಾಸಕಾಂಗ ಮತ್ತು ಕಾರ್ಯಾಂಗಕ್ಕಿರುವ ಅಧಿಕಾರ ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಮೇಲ್ಮನವಿಯ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಕೋರಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಹಲವು ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರದ ವ್ಯಾಪ್ತಿಯಿಂದ ಕೇಂದ್ರ ಸರ್ಕಾರ ತಮ್ಮನ್ನು ಹೊರಗಿಟ್ಟಿದೆ. ಲೆಫ್ಟಿನೆಂಟ್‌ ಗವರ್ನರ್‌ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರದ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ಮೇಲ್ಮನವಿಯ ಶೀಘ್ರ ವಿಚಾರಣೆ ನಡೆಸುವಂತೆ ಮತ್ತು ತಕ್ಷಣ ಈ ಗೊಂದಲ ಪರಿಹರಿಸುವಂತೆ ಕೋರಲು ಆಮ್‌ ಆದ್ಮಿ ಪಕ್ಷ ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಸಂಘರ್ಷಕ್ಕೆ ಸಂಬಂಧಿಸಿದಂತೆ ಹಲವು ಪ್ರತ್ಯೇಕ ವಿಚಾರಗಳ ಕುರಿತು ಸುಪ್ರೀಂ ಕೋರ್ಟ್‌ 2019ರ ಏಪ್ರಿಲ್ 14ರಂದು ಮಹತ್ವದ ತೀರ್ಪು ನೀಡಿತ್ತು. ಸಂವಿಧಾನದ ಷೆಡ್ಯೂಲ್‌ VII, ಪಟ್ಟಿ II, ನಮೂನೆ 41ರ ಅಡಿ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರಿದ್ದ ವಿಭಾಗೀಯ ಪೀಠವು ‘ಸೇವೆ’ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಭಿನ್ನ ನಿಲುವು ತಳೆದಿತ್ತು.

ದೆಹಲಿಯ ಎನ್‌ಸಿಟಿ ವ್ಯಾಪ್ತಿಯಲ್ಲಿ ಶಾಸಕಾಂಗ ಮತ್ತು ಕಾರ್ಯಕಾರಿ ಕ್ಷೇತ್ರದಿಂದ ಏಳನೇ ಷೆಡ್ಯೂಲ್ II ರ 41ನೇ ನಮೂನೆಗೆ ಸಂಬಂಧಿಸಿದ "ಸೇವೆಗಳನ್ನು" ಹೊರತುಪಡಿಸಿರುವ 2015ರ ಮೇ 21ರ ಭಾರತ ಸರ್ಕಾರದ ಅಧಿಸೂಚನೆಯು ಅಸಾಂವಿಧಾನಿಕ ಮತ್ತು ಕಾನೂನುಬಾಹಿರವೇ ಎಂಬ ವಿಚಾರವನ್ನು ನ್ಯಾಯಾಲಯವು ಪರಿಗಣಿಸಿದೆ. ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಭಿನ್ನ ನಿಲುವು ತಳೆದಿದ್ದರಿಂದ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಈ ವಿಚಾರದ ಕುರಿತು ತುರ್ತು ವಿಚಾರಣೆ ನಡೆಸಬೇಕು ಎಂದು ದೆಹಲಿ ಸರ್ಕಾರ ಕೋರಲು ಸಿದ್ಧತೆ ನಡೆಸಿದೆ. ಶೀಘ್ರದಲ್ಲಿ ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಕೋರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿರುವ ಸಂವಿಧಾನದ 239ಎಎ ವಿಧಿಯನ್ನು ಸುಪ್ರೀಂ ಕೋರ್ಟ್‌ ನ ಸಾಂವಿಧಾನಿಕ ಪೀಠವು 2018 ರ ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ. ಎನ್‌ಸಿಟಿಯ ವಿಶೇಷ ಪರಿಗಣತೆ, ದೆಹಲಿ ಶಾಸಕಾಂಗ ಸಭೆ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಗಳು ಮತ್ತು ಅವುಗಳು ಒಂದನ್ನೊಂದು ಪ್ರಭಾವಿಸುವ ರೀತಿಯನ್ನು ಪ್ರಕರಣದಲ್ಲಿ ಚರ್ಚಿಸಲಾಗಿದೆ. ಸಚಿವ ಸಂಪುಟದ ಸದಸ್ಯರ ಸಲಹೆ-ಸೂಚನೆ ಇಲ್ಲದೇ ಲೆಫ್ಟಿನೆಂಟ್‌ ಗವರ್ನರ್‌ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತಿಲ್ಲ. ಎನ್‌ಸಿಟಿಯ ಸರ್ಕಾರದ ಜೊತೆ ಶಾಂತಿಯುತವಾಗಿ ಅವರು ಕೆಲಸ ಮಾಡಬೇಕು ಎಂದು ಪೀಠವು ತೀರ್ಪಿನಲ್ಲಿ ಹೇಳಿತ್ತು.

ಸಾಂವಿಧಾನಿಕ ಪೀಠದ ತೀರ್ಪಿನ ಅನುಸಾರ ಸೇವೆಗಳು ಸೇರಿದಂತೆ ಪ್ರತ್ಯೇಕ ವಿಚಾರಗಳನ್ನು ತುರ್ತಾಗಿ ನಿರ್ಧರಿಸುವ ಸಂಬಂಧದ ಮೇಲ್ಮನವಿ ಪ್ರಕರಣವನ್ನು ಸಾಮಾನ್ಯ ಪೀಠದ ಮುಂದೆ ಇಡಲಾಗಿತ್ತು. ಸಾಂವಿಧಾನಿಕ ಪೀಠದ ತೀರ್ಪನ್ನು ಆಧರಿಸಿ 2019 ರಲ್ಲಿ ಸಾಮಾನ್ಯ ಪೀಠವು ತೀರ್ಪು ನೀಡಿದೆ. ಆದರೆ, ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಭೇದದ ಹಿನ್ನೆಲೆಯಲ್ಲಿ ಸೇವೆಗಳ ಕುರಿತಾದ ವಿಚಾರಕ್ಕೆ ಪರಿಹಾರ ದೊರೆತಿಲ್ಲ.