ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಓಲಾ ಎಲೆಕ್ಟ್ರಿಕ್ ಕಂಪೆನಿಯ ಮಾಲೀಕ ಭವೀಶ್ ಅಗರ್ವಾಲ್ ಸೇರಿ ಮೂವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಬಂಧ ಅವರಿಗೆ ಕಿರುಕುಳ ನೀಡಬಾರದು ಎಂದು ಸುಬ್ರಹ್ಮಣ್ಯಪುರ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಭಾವಿಶ್ ಅಗರ್ವಾಲ್, ಸುಬ್ರತ್ ಕುಮಾರ್ ದಾಸ್ ಮತ್ತು ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಸರ್ಕಾರದ ವಕೀಲರು ತಕ್ಷಣ ಈ ಆದೇಶವನ್ನು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಅರವಿಂದ್ ಸಹೋದರ ಅಶ್ವಿನ್ ಕಣ್ಣನ್ ಅವರು ದಾಖಲಿಸಿರುವ ದೂರಿನಲ್ಲಿ, ಓಲಾ ಎಲೆಕ್ಟ್ರಿಕ್ ಕಂಪನಿಯ ಹೋಮೋ ಲೋಗೇಷನ್ ಎಂಜಿಯರ್ ಆಗಿದ್ದ ಸಹೋದರ ಕೆ ಅರವಿಂದ್ ಅವರು 2025ರ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್ 30ರಂದು ಕಂಪನಿಯು 17,46,313 ರೂಪಾಯಿಯನ್ನು ಅರವಿಂದ್ ಅವರ ಖಾತೆಗೆ ನೆಫ್ಟ್ ಮಾಡಿದೆ. ಈ ಕುರಿತು ಅಕ್ಟೋಬರ್ 1ರಂದು ಕಂಪನಿಯ ಹೋಮೋಲೋಗೇಷನ್ ವಿಭಾಗದ ಮುಖ್ಯಸ್ಥರಾದ ಸುಬ್ರತ್ ಕುಮಾರ್ ದಾಸ್ ಅವರನ್ನು ವಿಚಾರಿಸಲಾಗಿ, ಇದಕ್ಕೆ ಕಂಪನಿಯ ಮಾನವ ಸಂಪನ್ಮೂಲದವರು ಪ್ರತಿಕ್ರಿಯಿಸಿದ್ದರು. ಆನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್ ದೇಸಾಯಿ, ಪರಮೇಶ್ ಮತ್ತು ರೋಷನ್ ಅವರು ಹಣಕಾಸಿನ ಬಗ್ಗೆ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು, ಕಂಪನಿಯ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡು ಬಂದಿರುವುದು ಅನುಮಾನಾಸ್ಪದವಾಗಿದೆ ಎಂದಿದ್ದಾರೆ.
ಡೆತ್ ನೋಟ್‌ನಲ್ಲಿ ಅರವಿಂದ್ ಅವರು ಸುಬ್ರತ್ ದಾಸ್ ಮತ್ತು ಭಾವಿಶ್ ಅಗರ್ವಾಲ್ ಕೆಲಸದಲ್ಲಿ ಒತ್ತಡ ಹೇರಿದ್ದು, ತನಗೆ ನೀಡಬೇಕಾದ ವೇತನ ಮತ್ತು ಭತ್ಯೆ ನೀಡದೇ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಕ್ಟೋಬರ್ 6ರಂದು ಅರವಿಂದ್ ಸಹೋದರ ಅಶ್ವಿನ್ ಕಣ್ಣನ್ ದೂರಿನಲ್ಲಿ ವಿವರಿಸಿದ್ದಾರೆ.
ಇದರ ಅನ್ವಯ ಸುಬ್ರತ್ ಕುಮಾರ್ ದಾಸ್, ಭಾವಿಶ್ ಅಗರ್ವಾಲ್ ಮತ್ತು ಓಲಾ ಎಲೆಕ್ಟ್ರಿಕ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 108 ಜೊತೆಗೆ 3(5)ರ ಅಡಿ ಪ್ರಕರಣ ದಾಖಲಿಸಲಾಗಿದೆ.