ವಾಣಿಜ್ಯ ಚಿಹ್ನೆ ಉಲ್ಲಂಘನೆಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಅಭಿಷೇಕ್ ಲೋಧಾ ಹಾಗೂ ಅವರ ಕಿರಿಯ ಸಹೋದರ ಅಭಿನಂದನ್ ಲೋಧಾ ನಡುವಣ ₹5,000 ಕೋಟಿ ಮೊತ್ತದ ದಾವೆ ಮಧ್ಯಸ್ಥಿಕೆಯ ಪರಿಣಾಮ ಇತ್ಯರ್ಥಗೊಂಡಿದೆ.
ಒಪ್ಪಂದದ ಭಾಗವಾಗಿ ಇಬ್ಬರೂ ಸಹೋದರರು ಕೆಳಗಿನ ಅಂಶಗಳ ಕುರಿತಂತೆ ಒಮ್ಮತಕ್ಕೆ ಬಂದಿದ್ದಾರೆ:
ಅಭಿಷೇಕ್ ಲೋಧಾ ಅವರೇ ಅವರ ನೇತೃತ್ವದ ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್ (ಎಂಡಿಎಲ್), 'ಲೋಧಾ' ಮತ್ತು 'ಲೋಧಾ ಗ್ರೂಪ್' ಬ್ರಾಂಡ್ ಹೆಸರುಗಳ ಏಕೈಕ ಮಾಲೀಕರು ಮತ್ತು ವಿಶೇಷ ಬಳಕೆದಾರರಾಗಿರುತ್ತಾರೆ.
ಅಭಿನಂದನ್ ಲೋಧಾ ಅವರು 'ಹೌಸ್ ಆಫ್ ಅಭಿನಂದನ್ ಲೋಧಾ' (ಎಚ್‌ಒಎಬಿಎಲ್) ಬ್ರ್ಯಾಂಡ್‌ನ ವಿಶೇಷ ಮಾಲೀಕರಾಗಿರುತ್ತಾರೆ.
'ಲೋಧಾ ಗ್ರೂಪ್' ಮತ್ತು 'ಅಭಿನಂದನ್ ಲೋಧಾ ಹೌಸ್' ನಡುವೆ ಯಾವುದೇ ಸಂಬಂಧವಿಲ್ಲ ಎಂದು ಪರಸ್ಪರ ಒಪ್ಪಿಕೊಳ್ಳಲಾಗಿದ್ದು ಇಬ್ಬರೂ ಪಕ್ಷಕಾರರು ಇದನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಿಳಿಸಲು ಸಮ್ಮತಿಸಿದ್ದಾರೆ.
ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್ ಅಥವಾ ಅಭಿಷೇಕ್ ಲೋಧಾ ನಿರ್ವಹಿಸುವ ಯಾವುದೇ ಉಳಿದ ವ್ಯವಹಾರಗಳಲ್ಲಿ ಅಭಿನಂದನ್ ಲೋಧಾ ಹಕ್ಕು ಹೊಂದಿಲ್ಲ ಎಂಬುದನ್ನು ಒಪ್ಪಂದ ಹೇಳುತ್ತದೆ. ಅಂತೆಯೇ, ಅಭಿಷೇಕ್ ಲೋಧಾ ಅವರು ಎಚ್‌ಒಎಬಿಎಲ್ ಅಥವಾ ಅಭಿನಂದನ್ ಲೋಧಾ ಅವರ ವ್ಯವಹಾರಗಳಲ್ಲಿ ಯಾವುದೇ ಹಕ್ಕು ಹೊಂದಿಲ್ಲ.
ಅಭಿನಂದನ್ ಲೋಧಾ ಅವರನ್ನು ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟ್ಗಿ, ರವಿ ಕದಮ್, ವೀರೇಂದ್ರ ತುಲ್ಸಾಪುರಕರ್, ಆಸ್ಪಿ ಚಿನೋಯ್, ಕಾರ್ಲ್ ತಾಂಬೋಲಿ ಮತ್ತು ಸಿದ್ಧಾರ್ಥ್ ಲೂತ್ರಾ ಪ್ರತಿನಿಧಿಸಿದ್ದರು. ರಶ್ಮಿಕಾಂತ್ ಅಂಡ್ ಪಾರ್ಟ್‌ನರ್ಸ್ ಮತ್ತು ಕರಂಜಾವಾಲಾ ಅಂಡ್ ಕಂಪೆನಿಗಳು ವಕೀಲರ ಹೆಸರನ್ನು ಸೂಚಿಸಿದ್ದವು.
ಅಭಿಷೇಕ್ ಲೋಧಾ ಅವರ ಪರವಾಗಿ ವೆರಿಟಾಸ್ ಲೀಗಲ್ ಸಂಸ್ಥೆ ಮೂಲಕ ಹಿರಿಯ ವಕೀಲರಾದ ಜನಕ್ ದ್ವಾರಕಾದಾಸ್, ಡೇರಿಯಸ್ ಜೆ ಕಂಬಾಟಾ ಮತ್ತು ಶರಣ್ ಜಗ್ತಿಯಾನಿ ವಾದ ಮಂಡಿಸಿದ್ದರು.
ಅಭಿಷೇಕ್ ಅವರ ಕಿರಿಯ ಸಹೋದರ ಅಭಿನಂದನ್ ಅವರ ಕಂಪೆನಿಗಳು 'ಲೋಧಾ' ಮತ್ತು 'ಲೋಧಾ ಗ್ರೂಪ್' ಎಂಬ ಬ್ರಾಂಡ್ ಹೆಸರುಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿವೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಾದ ಮೊಕದ್ದಮೆ ಹೇಳಿತ್ತು.
ಲೋಧಾ ಸಹೋದರರು 2015ರಲ್ಲಿ ಬೇರ್ಪಟ್ಟ ಬಳಿಕ ಕಾರ್ಪೊರೇಟ್ ವಿವಾದ ತಲೆಎತ್ತಿತ್ತು. ಅಭಿನಂದನ್ ತರುವಾಯ ಹೌಸ್ ಆಫ್ ಅಭಿನಂದನ್ ಲೋಧಾ ಕಂಪೆನಿ ಸ್ಥಾಪಿಸಿದರು. ಅವರ ಹಿರಿಯ ಸಹೋದರ ಅಭಿಷೇಕ್ ಅವರು ಮ್ಯಾಕ್ರೋಟೆಕ್ ಅಡಿಯಲ್ಲಿ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರ ಮುಂದುವರೆಸಿದರು.
ಮಾರ್ಚ್ 2017 ರಲ್ಲಿ ಮಾಡಲಾದ ಕೌಟುಂಬಿಕ ಪಾಲು ಒಪ್ಪಂದದ ಪ್ರಕಾರ ಅಭಿಷೇಕ್ ಮ್ಯಾಕ್ರೋಟೆಕ್ ಅಡಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಿಯಂತ್ರಣ ಉಳಿಸಿಕೊಂಡರೆ ಅಭಿನಂದನ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸದ ಹೊಸ ವ್ಯವಹಾರದತ್ತ ಗಮನಹರಿಸಬೇಕಿತ್ತು.
ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಾಣಿಜ್ಯ ಚಿಹ್ನೆಗಳು ಸೇರಿದಂತೆ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು ಮ್ಯಾಕ್ರೋಟೆಕ್‌ನೊಂದಿಗೆ ಉಳಿಯುತ್ತವೆ ಎಂದು ಇದು ಷರತ್ತು ವಿಧಿಸಿತ್ತು.
ಈ ಒಪ್ಪಂದವು ಐದು ವರ್ಷಗಳ ಕಾಲ ಮುಂಬೈ ಮೆಟ್ರೋಪಾಲಿಟನ್ ಏರಿಯಾದಲ್ಲಿ ಮತ್ತು ಗ್ರೇಟರ್ ಲಂಡನ್‌ನಲ್ಲಿ ನಿಗದಿತ ಅವಧಿಗೆ ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅಭಿನಂದನ್ ಅವರನ್ನು ತಡೆಯುವ ಸ್ಪರ್ಧಾರಾಹಿತ್ಯತೆಯ ಷರತ್ತನ್ನು ಸಹ ಒಳಗೊಂಡಿದೆ. ಆದರೆ, ಅಭಿನಂದನ್ ಅವರು ಈ ಜವಾಬ್ದಾರಿಗಳನ್ನು ಪಾಲಿಸದ ಕಾರಣ, ಡಿಸೆಂಬರ್ 2023ರಲ್ಲಿ ಮತ್ತೊಂದು ಮಹತ್ವದ ಒಪ್ಪಂದ ಮಾಡಿಕೊಂಡರು.
ಈ ಹೊಸ ಒಪ್ಪಂದದ ಪ್ರಕಾರ 'ಲೋಧಾ ವೆಂಚರ್ಸ್' ಸೇರಿದಂತೆ 'ಲೋಧಾ'ವನ್ನು ಹೋಲುವ ಅಥವಾ ಅದನ್ನು ಮುನ್ನಡೆಸುವ ಹೆಸರುಗಳನ್ನು ಬಳಸದಂತೆ ನಿರ್ಬಂಧ ವಿಧಿಸಲಾಗಿತ್ತು .ಒಪ್ಪಂದಗಳ ಹೊರತಾಗಿಯೂ ಅಭಿನಂದನ್ ಲೋಧಾ ಅವರು ಉದ್ದೇಶಪೂರ್ವಕವಾಗಿ ತಮ್ಮ ವಾಣಿಜ್ಯ ಚಿಹ್ನೆಯನ್ನು ಉಲ್ಲಂಘಿಸಿದ್ದಾರೆ ಎಂದು ಮ್ಯಾಕ್ರೊಟೆಕ್ ಆರೋಪಿಸಿತ್ತು.
ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರು ಜನವರಿ 31 ರಂದು ಆದೇಶಿಸಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರನ್ನು ಮಧ್ಯವರ್ತಿಯಾಗಿ ನೇಮಿಸಿದ್ದರು. ಇದೀಗ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಗಿದೆ.
[ಪತ್ರಿಕಾ ಪ್ರಕಟಣೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]