Karnataka High Court 
ಸುದ್ದಿಗಳು

ಮುಸ್ಲಿಮರಿಗೆ ಮೀಸಲಾತಿ ರದ್ದತಿ: ಸುಪ್ರೀಂನಲ್ಲಿ ಪ್ರಕರಣ ಬಾಕಿ ಉಲ್ಲೇಖಿಸಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

Bar & Bench

ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ ‘2ಬಿ’ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ.4 ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎರಡೂವರೆ ತಿಂಗಳು ಮುಂದೂಡಿದೆ.

ಬೆಂಗಳೂರಿನ ವಕೀಲ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿದಾರರ ಪರ ಹಿರಿಯ ವಕೀಲ ಸಿ ಎಸ್ ದ್ವಾರಕಾನಾಥ್‌ ಅವರು ಪ್ರಕರಣದ ಕುರಿತು ವಿವರಿಸಿದರು.

ಇದಕ್ಕೆ ಪೀಠವು ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಇಲ್ಲಿ ಯಾವುದೇ ನಿರ್ದೇಶನ ಅಥವಾ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದಿತು.

ಆಗ ಅರ್ಜಿದಾರರ ಪರ ವಕೀಲರು ಕರ್ನಾಟಕ ಸರ್ಕಾರವು ಮುಸ್ಲಿಮರ ಮೀಸಲಾತಿಯನ್ನು ರದ್ದುಪಡಿಸಿದ್ದು, ಇದರಿಂದ ಸ್ಥಳೀಯ ಮುಸ್ಲಿಂ ಸಮುದಾಯದವರು ಬಾಧಿತರಾಗಿದ್ದಾರೆ. ಈ ಪ್ರಕರಣ ರಾಜ್ಯ ಹೈಕೋರ್ಟ್‌ನ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.

ಆಗ ಪೀಠವು ಏನೇ ಇರಲಿ ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಮುಂದೆ ನೋಡೋಣ ಎಂದು ತಿಳಿಸಿ, ವಿಚಾರಣೆಯನ್ನು 10 ವಾರಗಳ ಕಾಲ ಮುಂದೂಡಿತು.

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಸರ್ಕಾರದ ಈ ನಿರ್ಧಾರ ಸಂವಿಧಾನದ 14, 15 ಮತ್ತು 16ನೇ ವಿಧಿಗಳಿಗೆ ವಿರುದ್ಧವಾಗಿದೆ. ಮೀಸಲಾತಿ ರದ್ದತಿಯಿಂದ ಮುಸ್ಲಿಂ ಸಮುದಾಯದ ಶಿಕ್ಷಣ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಮುಸ್ಲಿಮರ ಶೇ.4 ಮೀಸಲಾತಿ ರದ್ದುಪಡಿಸಿ 2023ರ ಮಾರ್ಚ್‌ 27ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಿಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.