IPS Officer Seemanth Kumar Singh and Karnataka HC  Twitter
ಸುದ್ದಿಗಳು

ಅಧಿಕಾರ ದುರ್ಬಳಕೆ ಆರೋಪ: ಐಪಿಎಸ್‌ ಅಧಿಕಾರಿ ಸೀಮಂತ್‌ ಕುಮಾರ್‌ ಸಿಂಗ್‌ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದು

Bar & Bench

ಭ್ರಷ್ಟಾಚಾರ ನಿಗ್ರಹ ದಳದ ಕರ್ತವ್ಯದಲ್ಲಿದ್ದಾಗ ಅಧಿಕಾರ ದುರುಪಯೋಗ ಮತ್ತು ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಹಿಂದಿನ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಏಳು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು ಎಂದು ಹೇಳಿರುವ ಹೈಕೋರ್ಟ್‌ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಕ್ರಮ ರದ್ದುಪಡಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ ಅರ್ಜಿದಾರ ಅಧಿಕಾರಿಗಳು ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅವರ ವಿರುದ್ಧ ಅಧಿಕಾರ ದುರ್ಬಳಕೆ, ಕ್ರಿಮಿನಲ್ ದುರ್ನಡತೆ, ಸುಲಿಗೆ ಯತ್ನ, ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದ ಪ್ರಕರಣವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ತಮ್ಮ ವಿರುದ್ಧದ ವಿಚಾರಣೆ ಕಾನೂನು ಬಾಹಿರ. ಪ್ರಕರಣದಲ್ಲಿ ಪೂರ್ವಾನುಮತಿ ಪಡೆಯದೆ ದೂರನ್ನು ವಿಚಾರಣೆಗೆ ಪರಿಗಣಿಸಲಾಗಿದೆ. ಆದ್ದರಿಂದ ರದ್ದುಗೊಳಿಸಬೇಕು ಎಂದು ಕೋರಿ ಸೀಮಂತ್ ಕುಮಾರ್ ಸಿಂಗ್, ಎಂ ಕೆ ತಿಮ್ಮಯ್ಯ, ಪ್ರಕಾಶ್, ಆರ್ ಎಚ್ ವಿಜಯಾ, ಉಮಾ ಪ್ರಶಾಂತ್, ಎಸ್ ಆರ್ ವೀರೇಂದ್ರ ಪ್ರಸಾದ್, ಮಂಜುನಾಥ್ ಜಿ.ಹೂಗಾರ್ ಅರ್ಜಿ ಸಲ್ಲಿಸಿದ್ದರು.

M K Thammaiah Vs State of Karnataka.pdf
Preview