Chhattisgarh High Court  
ಸುದ್ದಿಗಳು

ವಿದ್ಯಾರ್ಥಿಗಳ ಮುಂದೆ ಪತ್ನಿಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು ಮಾನಸಿಕ ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

ಹೀಗಾಗಿ ಕ್ರೌರ್ಯದ ಆಧಾರದಲ್ಲಿ ಪತಿಯಿಂದ ವಿಚ್ಛೇದನ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ದೀಪಕ್ ಕುಮಾರ್ ತಿವಾರಿ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿತು.

Bar & Bench

ಶಿಕ್ಷಕಿಯಾಗಿರುವ ಪತ್ನಿಯನ್ನು ವಿದ್ಯಾರ್ಥಿಗಳೆದುರು ಅಸಭ್ಯ ಭಾಷೆಯಲ್ಲಿ ನಿಂದಿಸುವುದು ಸಮಾಜದಲ್ಲಿ ಆಕೆಯ ಘನತೆಗೆ ಕುಂದು ತರುತ್ತದೆ ಮಾತ್ರವಲ್ಲದೆ ಹಿಂದೂ ವಿವಾಹ ಕಾಯಿದೆಯಡಿ ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಹೀಗಾಗಿ ಕ್ರೌರ್ಯದ ಆಧಾರದಲ್ಲಿ ಪತಿಯಿಂದ ವಿಚ್ಛೇದನ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ದೀಪಕ್ ಕುಮಾರ್ ತಿವಾರಿ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿತು.

“ದುಡಿಯುವ ಪತ್ನಿ ಕೆಲವೊಮ್ಮೆ ತಡವಾಗಿ ಮನೆಗೆ ಬಂದಾಗ ಗಂಡ ಆಕೆಯ ಚಾರಿತ್ರ್ಯಹರಣ ಮಾಡುತ್ತಿದ್ದ ಮತ್ತು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಲು ಆರಂಭಿಸಿದಾಗ ಪತಿ ತುಚ್ಛವಾಗಿ ಮಾತನಾಡುತ್ತಿದ್ದ ಎಂಬ ಆರೋಪ ಇದ್ದು ಹೆಂಡತಿಯ ಚಾರಿತ್ರ್ಯಕ್ಕೆ ಸಂಬಂಧಿಸಿದ ನಿಂದನೆಗಳು ಸಹಜವಾಗಿಯೇ ಸಮಾಜದಲ್ಲಿ ಅದರಲ್ಲಿಯೂ ವಿದ್ಯರ್ಥಿಗಳೆದುರು ಹೆಂಡತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತವೆ. ಇದರಿಂದ ಎಳೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯ ಮೇಲೆ ಗೌರವ ಕಳೆದುಕೊಳ್ಳಬಹುದು” ಎಂದು ನ್ಯಾಯಾಲಯ ನುಡಿದಿದೆ.

ಮಹಿಳೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2021ರ ನವೆಂಬರ್‌ನಲ್ಲಿ ರಾಯ್‌ಪುರದ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ತೀರ್ಪನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಪೀಠ ಈ ತೀರ್ಪು ನೀಡಿದೆ.

ಪ್ರೇಮ ವಿವಾಹವಾಗಿರುವುದರಿಂದ ಪತ್ನಿಯನ್ನು ಆಕೆಯ ಅತ್ತೆ-ಮಾವಂದಿರು ಆರಂಭದಲ್ಲಿ ಒಪ್ಪಿಕೊಂಡಿರಲಿಲ್ಲ. ಪತಿ ನಿರುದ್ಯೋಗಿಯಾಗಿದ್ದು, ಕುಟುಂಬದ ವೆಚ್ಚ ಭರಿಸುವುದಕ್ಕಾಗಿ ಆಕೆ  ಶಿಕ್ಷಕಿಯಾಗಿ ಕೆಲಸ ಆರಂಭಿಸಿದ್ದರು. ಆದರೆ ಆಕೆ ಉದ್ಯೋಗದಲ್ಲಿರುವುದು ಪತಿಗೆ ಇಷ್ಟವಿರಲಿಲ್ಲ. ಆಕೆಯ ನಡತೆಯನ್ನು ಆತ ಅನುಮಾನಿಸುತ್ತಿದ್ದ ಮತ್ತು ಪುರುಷ ಸಹೋದ್ಯೋಗಿಗಳೊಂದಿಗೆ ಅಕ್ರಮ ಸಂಬಂಧ  ಹೊಂದಿರುವುದಾಗಿ ಆಗಾಗ್ಗೆ ಆರೋಪಿಸುತ್ತಿದ್ದ. ಆದ್ದರಿಂದ ಶಿಕ್ಷಕ ವೃತ್ತಿ ತೊರೆದ ಆಕೆ ಮನೆಯಲ್ಲಿಯೇ ಟ್ಯೂಷನ್‌ ಆರಂಭಿಸಿದ್ದರು. ಆದರೆ ಟ್ಯೂಷನ್‌ ಸಮಯದಲ್ಲಿ ಆಕೆಯನ್ನು ಪತಿ ಅಸಹ್ಯಕರ ಭಾಷೆಯಲ್ಲಿ ನಿಂದಿಸಿ ಚಾರಿತ್ರ್ಯಹರಣ ಮಾಡುತ್ತಿದ್ದ. ಈ ನಿಂದನೆ ದಿನೇ ದಿನೆ ಹೆಚ್ಚುತ್ತಾ ಹೋಯಿತು. ಏಪ್ರಿಲ್ 9, 2015ರಂದು ಅವಳನ್ನು ವೈವಾಹಿಕ ಮನೆಯಿಂದ ಹೊರಹಾಕಿದ ಪತಿ ಮತ್ತೆಂದಿಗೂ ವಾಪಸ್‌ ಕರೆತರುವ ಯತ್ನ ಮಾಡಲಿಲ್ಲ ಎಂದು ಆರೋಪಿಸಲಾಗಿತ್ತು.

ಈ ವಾದವನ್ನು ಅಲ್ಲಗಳೆಯುವಂತಹ ಯಾವುದೇ ಸಾಕ್ಷ್ಯಾಧಾರವನ್ನು ಪತಿ ಮಂಡಿಸುವಲ್ಲಿ ವಿಫಲನಾಗಿದ್ದಾನೆ ಎಂದು ಪೀಠ ಹೇಳಿತು. “ಪತಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದು ಜೀವನೋಪಾಯಕ್ಕಾಗಿ ಪತ್ನಿ ಯಾವುದಾದರೂ ಕೆಲಸ ಮಾಡಬೇಕಾದ ಒತ್ತಡ ಉಂಟಾದಾಗ (ಗಂಡನ) ಆಕ್ಷೇಪಣೆ ಪಕ್ಷಕಾರರ ಬದುಕು ಮತ್ತು ಜೀವನಮಟ್ಟದ ಮೇಲೆ ಪರಿಣಾಮ ಬೀರುವ ಹಣಕಾಸು ಬಿಕ್ಕಟ್ಟಿಗೆ ಕಾರಣವಾಗುವುದು ಸ್ವಾಭಾವಿಕ. ಪತಿ ಉದ್ಯೋಗದಲ್ಲಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದ್ದರಿಂದ ಪತಿ ಕೆಲಸ ಮಾಡುತ್ತಿಲ್ಲ ಮತ್ತು ಹೆಂಡತಿ ಕೆಲಸ ಮಾಡಲು ಬಯಸಿದಾಗ ಅದನ್ನು ವಿರೋಧಿಸಲಾಯಿತು ಎಂಬ ಪತ್ನಿಯ ಏಕೈಕ ಸಾಕ್ಷ್ಯ ಸ್ವೀಕಾರಾರ್ಹವಾಗಿ ತೋರುತ್ತದೆ” ಎಂದು ನ್ಯಾಯಾಲಯ ನುಡಿದಿದೆ.

ಆದುದರಿಂದ, ಪತಿ  ಹೆಂಡತಿಯನ್ನು ಕೆಲಸಕ್ಕೆ ಹೋಗದಂತೆ ತಡೆದು  ಆಕೆಯ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿ ಮನೆಗೆ ಸೀಮಿತಗೊಳಿಸಿದ್ದರಿಂದ ಅವಳು ಮಾನಸಿಕ ಮತ್ತು ದೈಹಿಕ ಕ್ರೌರ್ಯಕ್ಕೆ  ತುತ್ತಾದಳು ಎಂದು ಸಾಬೀತಾಗಿದೆ ಎಂಬುದಾಗಿ ನ್ಯಾಯಾಲಯ ತೀರ್ಮಾನಿಸಿತು.