Delhi High Court, Couple 
ಸುದ್ದಿಗಳು

ಪತಿ ಮತ್ತವರ ಕುಟುಂಬಕ್ಕೆ ಕಿರುಕುಳ ನೀಡಲು ಐಪಿಸಿ 498ಎ ದುರ್ಬಳಕೆ ಆಗುತ್ತಿರುವುದು ನೋವಿನ ಸಂಗತಿ: ದೆಹಲಿ ಹೈಕೋರ್ಟ್

ವಾಸ್ತವ ಘಟನೆಗಳನ್ನು ತಪ್ಪಾಗಿ ರೂಪಿಸಿ ವಕೀಲರ ಸಲಹೆಯಂತೆ ಇಂತಹ ಪ್ರಕರಣಗಳನ್ನು ದಾಖಲಿಸುವುದು ಈಗ ತೀವ್ರಗತಿಯಲ್ಲಿ ಏರುತ್ತಿದೆ. ಹಾಗೆಂದು ನೈಜ ಕ್ರೌರ್ಯದ ಪ್ರಕರಣಗಳು ಅಸ್ತಿತ್ವದಲ್ಲಿಲ್ಲವೆಂದಲ್ಲ ಎಂದ ನ್ಯಾಯಾಲಯ.

Bar & Bench

ವಿವಾಹಿತ ಮಹಿಳೆಯರ ಮೇಲಿನ ಕ್ರೌರ್ಯ ನಿಗ್ರಹಿಸಲೆಂದು ರೂಪುಗೊಂಡಿರುವ ಐಪಿಸಿ ಸೆಕ್ಷನ್ 498 ಎ ದುರುಪಯೋಗವಾಗುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ. ಅದನ್ನು ಪತಿ ಇಲ್ಲವೇ ಆತನ ಕುಟುಂಬದ ವಿರುದ್ಧ ಕಿರುಕುಳ ನೀಡುತ್ತಿರುವ ಸಾಧನವಾಗಿ ಬಳಸಲಾಗುತ್ತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ [ಅಜಯ್‌ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹಾಗೆಂದು, ಸಂತ್ರಸ್ತೆಯರನ್ನು ಮೂಕವೇದನೆಗೆ ದೂಡುವ, ಕಿರುಕುಳಕ್ಕೆ ಈಡುಮಾಡುವ ವರದಕ್ಷಿಣೆ ಎಂಬ ಸಾಮಾಜಿಕ ಅನಿಷ್ಟದ ಬಗ್ಗೆ ನ್ಯಾಯಾಲಯ ಕುರುಡಾಗಿ ಕುಳಿತಿಲ್ಲ ಎಂತಲೂ ಇದೇ ವೇಳೆ ನ್ಯಾಯಮೂರ್ತಿ ಅಮಿತ್ ಮಹಾಜನ್ ಸ್ಪಷ್ಟಪಡಿಸಿದರು.

ಲಾಭಕ್ಕಾಗಿ ಸತ್ಯ ಘಟನೆಗಳನ್ನು ಸುಳ್ಳೇ ನಿರೂಪಿಸಿ ಐಪಿಸಿ ಸೆಕ್ಷನ್‌ 498 ಎಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಅನೇಕ ಪ್ರಕರಣಗಳಲ್ಲಿ ಪತಿ ಮತ್ತು ಅವರ ಕುಟುಂಬವನ್ನು ವೈವಾಹಿಕ ಮೊಕದ್ದಮೆಯಲ್ಲಿ ಸಿಲುಕಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ನ್ಯಾಯಾಲಯಗಳು ಗಮನಿಸಿವೆ. ವಿವಾಹಿತ ಮಹಿಳೆಗೆ ನೀಡಲಾಗುವ ಕಿರುಕುಳ ತಪ್ಪಿಸಲು ಐಪಿಸಿ ಸೆಕ್ಷನ್ 498ಎ ಜಾರಿಗೆ ಬಂತಾದರೂ, ಈಗ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಮತ್ತು ಅವರನ್ನು ಹದ್ದುಬಸ್ತಿನಲ್ಲಿಡಲು ಅದನ್ನು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಬೇಕಾದುದು ದುಃಖಕರ ಸಂಗತಿ. ವಾಸ್ತವಿಕ ಘಟನೆಗಳನ್ನು ಉತ್ಪ್ರೇಕ್ಷಿಸಿ, ತಪ್ಪಾಗಿ ನಿರೂಪಿಸಿ ವಕೀಲರ ಸಲಹೆಯ ಮೇರೆಗೆ ಸುಳ್ಳು ಕ್ರೌರ್ಯ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಹಾಗೆಂದು ಮಹಿಳೆಯರ ಮೇಲಿನ ನಿಜವಾದ ಕಿರುಕುಳ ಪ್ರಕರಣಗಳು ಅಸ್ತಿತ್ವದಲ್ಲಿಲ್ಲ ಎಂದು ಇದರ ಅರ್ಥವಲ್ಲ" ಎಂದು ಫೆಬ್ರವರಿ 7ರ ತೀರ್ಪು ವಿವರಿಸಿದೆ.

ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಮತ್ತು ಅವರ ಮೇಲೆ ಹಿಡಿತ ಸಾಧಿಸಲು ಐಪಿಸಿ ಸೆಕ್ಷನ್ 498ಎಯನ್ನು ಸಾಧನವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ದುಃಖಕರ ಸಂಗತಿ.
ದೆಹಲಿ ಹೈಕೋರ್ಟ್

ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಆರೋಪದ ಮೇಲೆ ಮಹಿಳೆಯೊಬ್ಬರು ತನ್ನ ಪರಿತ್ಯಕ್ತ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

2011ರಲ್ಲಿ ವಿವಾಹವಾಗಿದ್ದ ಜೋಡಿ 2014ರಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದರು. ಆರು ವರ್ಷದ ಬಳಿಕ 2017ರಲ್ಲಿ ವಿವಾಹಿತಳಾಗಿದ್ದ ಮಹಿಳೆ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ, ಕ್ರೌರ್ಯದ ಕಾರಣಕ್ಕೆ ಗರ್ಭಪಾತ ಉಂಟಾದ ಆರೋಪಗಳನ್ನು ಮಾಡಿದ್ದರು. ಇತ್ತ ತಮ್ಮ ವಿರುದ್ಧ ದಾಖಲಾಗಿರುವ ಕ್ರೌರ್ಯದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆತನ ಮನವಿ ಪುರಸ್ಕರಿಸಿದ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿದೆ.

ಅರ್ಜಿದಾರರ ವಿರುದ್ಧದ ಅದರಲ್ಲಿಯೂ ತಡವಾಗಿ ಅಸ್ಪಷ್ಟವಾದ ಆರೋಪ ಮಾಡಲಾಗಿದೆ. ಕ್ರಿಮಿನಲ್ ಪ್ರಕರಣ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮ ಎಂದು ಅದು ಹೇಳಿದೆ.