Justice M Nagaprasanna and Karnataka HC 
ಸುದ್ದಿಗಳು

[ಭ್ರಷ್ಟಾಚಾರ ಪ್ರಕರಣ] ತನಿಖಾ ವಿಧಾನಗಳನ್ನು ಸಂತೋಷವಾಗಿ ಉಪೇಕ್ಷಿಸಿದ ಎಸಿಬಿ: ಹೈಕೋರ್ಟ್‌ ಕಿಡಿ

“ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇದನ್ನು ನೋಡಿ ಕಣ್ಮುಚ್ಚಿ ಕೂರಲಾಗದು” ಎಂದು ಎಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೀಠ.

Bar & Bench

ಭ್ರಷ್ಟಾಚಾರ ಪ್ರಕರಣದ ತನಿಖೆ ಮಾಡುವಾಗ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ತನಿಖಾ ವಿಧಾನಗಳನ್ನು ಸಂತೋಷದಿಂದ ಉಪೇಕ್ಷೆ ಮಾಡಿದೆ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರ ಆದೇಶದ ವೇಳೆ ಕಿಡಿಕಾರಿದೆ.

ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಕಾರ್ಯಕಾರಿ ಎಂಜಿನಿಯರ್‌ ಕೆ ಆರ್‌ ಕುಮಾರ್ ನಾಯ್ಕ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದೆ.

ತನಿಖೆಯ ವೇಳೆ ಎಸಿಬಿಯ ಲೋಪಗಳನ್ನು ಪಟ್ಟಿ ಮಾಡಿರುವ ನ್ಯಾಯಾಲಯವು ಕುಮಾರ್‌ ನಾಯ್ಕ್ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣವನ್ನು ರದ್ದುಪಡಿಸಿದೆ. “ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇದನ್ನು ನೋಡಿ ಕಣ್ಮುಚ್ಚಿ ಕೂರಲಾಗದು” ಎಂದು ಎಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘‘ಎಸಿಬಿಯು ತರಾತುರಿಯಲ್ಲಿ ಮೂಲ ವರದಿ ತಯಾರಿಸಿದೆ. 24 ಗಂಟೆಗಳ ಅವಧಿಯಲ್ಲಿ ಮೂಲ ವರದಿ ಮತ್ತು ಎಫ್‌ಐಆರ್ ಸಿದ್ದಪಡಿಸಲಾಗಿದೆ. ಅಧಿಕಾರಿಯ ಸೇವಾ ವಿವರವನ್ನೂ ನಮೂದಿಸಲಾಗಿಲ್ಲ. ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ವಾರ್ಷಿಕ ಸಂಬಳವನ್ನೂ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿಯನ್ನೂ ಸಹ ಪರಾಮರ್ಶೆ ಮಾಡಲಾಗಿಲ್ಲ. ಕಾನೂನಿನ ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪ ನೋಡಿ ಕಣ್ಮುಚ್ಚಿ ಕೂರಲಾಗದು’’ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಾದಿಸಿದ ವಕೀಲ ಕೆ ಸತೀಶ್ ಅವರು “ಕಾನೂನು ಬಾಹಿರವಾಗಿ ಎಸಿಬಿ ತನಿಖಾ ಪ್ರಕ್ರಿಯೆ ನಡೆಸಿದೆ. ಎಫ್‌ಐಆರ್‌ಗೂ ಮೊದಲು ಎಸಿಬಿ ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ. ಮೂಲ ವರದಿಯನ್ನೂ ತಯಾರಿಸಿಲ್ಲ. ಆದರೂ ಎಸಿಬಿ ದಾಳಿ ನಡೆಸಿ ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡಲಾಗಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2022ರ ಮಾರ್ಚ್‌ 15ರಂದು ಆರ್‌ಟಿಒ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ಧ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ದೂರು ಎಸಿಬಿಯಲ್ಲಿ ದಾಖಲಾಗಿತ್ತು. ಇದರ ಅನ್ವಯ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಅದೇ ವೇಳೆ ಮುನಾವರ್‌ ಪಾಷಾ ಎಂಬುವರ ಮನೆಯನ್ನೂ ಸಹ ಶೋಧಿಸಲಾಗಿತ್ತು. ಆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಕೆಪಿಟಿಸಿಎಲ್ ನಲ್ಲಿ ಕಾರ್ಯಕಾರಿ ಎಂಜಿನಿಯರ್‌ ಆಗಿದ್ದ ಕೆ ಆರ್ ಕುಮಾರ್ ನಾಯ್ಕ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಮಾರ್ಚ್‌ 16ರಂದು ದಾಖಲಿಸಲಾಗಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೊದಲು ಮೂಲ ವರದಿ (ಸೋರ್ಸ್ ರಿಪೋರ್ಟ್) ತಯಾರಿಸಬೇಕು. ನಂತರ ಅದನ್ನು ಆಧರಿಸಿ ಎಫ್‌ಐಆರ್ ದಾಖಲಿಸಬೇಕು. ಆದರೆ, ಎಸಿಬಿ ಇದ್ಯಾವುದನ್ನೂ ಮಾಡದೇ ಎಫ್‌ಐಆರ್‌ದಾಖಲಿಸಿತ್ತು. ಒಂದೇ ದಿನ ಅಂದರೆ 2022ರ ಮಾರ್ಚ್‌ 16ರಂದೇ ಮೂಲ ವರದಿ ಸಿದ್ಧಪಡಿಸಿ, ಅದೇ ದಿನ 24 ಗಂಟೆಗಳಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಎಸಿಬಿ ಕ್ರಮ ಕಾನೂನುಬಾಹಿರ ಎಂದು ಕುಮಾರ್ ನಾಯ್ಕ್ ಹೈಕೋರ್ಟ್ ಕದ ತಟ್ಟಿದ್ದರು.

ಎಸಿಬಿಯನ್ನು ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಪ್ರತಿನಿಧಿಸಿದ್ದರು.