ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಪರ್ಯಾಯವಾಗಿ ಸ್ಥಾಪಿಸಲು ಉದ್ದೇಶಿಸಿರುವ ಬೆಂಗಳೂರಿನ ಹೈಕೋರ್ಟ್ ಬಾರ್ ಅಸೋಸಿಯೇಶನ್ ( ಎಚ್‌ಸಿಬಿಎ) ಪದಾಧಿಕಾರಿಗಳು ಯಾವುದೇ ಸೌಲಭ್ಯ ಬಳಕೆ ಮಾಡಲು ನಿರ್ಬಂಧಿಸುವುದಿಲ್ಲ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಯಾವುದೇ ರೀತಿಯಲ್ಲೂ ಮುಂದಿನ ಹೆಜ್ಜೆ ಇರಿಸದಂತೆ ಎಚ್‌ಬಿಎಗೆ ಹೈಕೋರ್ಟ್ ನಿರ್ದೇಶಿಸಿದೆ.
ಪರ್ಯಾಯ ಸಂಘ ಸ್ಥಾಪಿಸಲು ಮುಂದಾದ ಸದಸ್ಯರನ್ನು ಅಮಾನತುಗೊಳಿಸಿ ಆಗಸ್ಟ್ 28ರಂದು ವಿಶೇಷ ಸಾಮಾನ್ಯ ಸಭೆಯಲ್ಲಿ ಎಎಬಿಯು ನಿರ್ಧರಿಸಿದ್ದು, ಇದು ಕಾನೂನಿಗೆ ಅನುಗುಣವಾಗಿಲ್ಲ. ಹೀಗಾಗಿ, ನಿರ್ಣಯವನ್ನು ವಜಾಗೊಳಿಸಬೇಕು ಎಂದು ಹೈಕೋರ್ಟ್ ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಟಿ ಎ ರಾಜಶೇಖರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.
ಹಿರಿಯ ವಕೀಲರೂ ಆದ ವಿವೇಕ್ ಸುಬ್ಬಾರೆಡ್ಡಿ ಅವರು ಹೈಕೋರ್ಟ್ ಬಾರ್ ಅಸೋಸಿಯೇಶನ್ ಸದಸ್ಯರಿಗೆ ಸೌಲಭ್ಯ ಬಳಕೆಗೆ ನಿರ್ಬಂಧ ವಿಧಿಸುವುದಿಲ್ಲ ಎಂದು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ನೂತನ ಹೈಕೋರ್ಟ್ ಬಾರ್ ಅಸೋಸಿಯೇಶನ್ ನೋಂದಣಿಯನ್ನೇ ಪ್ರಶ್ನಿಸಿರುವುದರಿಂದ ಹೈಕೋರ್ಟ್ ಬಾರ್ ಅಸೋಸಿಯೇಶನ್ ಯಾವುದೇ ರೀತಿಯಲ್ಲೂ ಮುಂದಿನ ಹೆಜ್ಜೆ ಇರಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿ ಸಂಬಂಧ ಬೆಂಗಳೂರು ವಕೀಲರ ಸಂಘ, ರಾಜ್ಯ ವಕೀಲರ ಪರಿಷತ್ ಮತ್ತು ಸಹಕಾರ ಸೊಸೈಟಿಗಳ ಜಂಟಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿ, ನ್ಯಾಯಾಲಯ ಆದೇಶಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಕೆಎಸ್‌ಬಿಸಿ ಚುನಾವಣೆಗೆ ಸಂಬಂಧಿಸಿದ ಅರ್ಜಿಗಳ ಜೊತೆ ಸೇರಿಸಿ, ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಬೆಂಗಳೂರಿನ ಹೈಕೋರ್ಟ್ ಬಾರ್ ಅಸೋಸಿಯೇಶನ್ ಪದಾಧಿಕಾರಿಗಳ ವಿರುದ್ಧ ಯಾವುದೇ ಆತುರ ಕ್ರಮಕೈಗೊಳ್ಳದಂತೆ ಎಎಬಿಗೆ ನಿರ್ದೇಶಿಸಬೇಕು. ಹೈಕೋರ್ಟ್ ಬಾರ್ ಅಸೋಸಿಯೇಶನ್ ಪದಾಧಿಕಾರಿಗಳಿಗೆ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಎಎಬಿಯ ವಿರುದ್ಧ ಕ್ರಮಕೈಗೊಳ್ಳಲು ಕೆಎಸ್‌ಬಿಸಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.