Twitter, Karnataka High Court 
ಸುದ್ದಿಗಳು

ಖಾತೆ ನಿರ್ಬಂಧ ಪ್ರಕರಣ: ಟ್ವಿಟರ್‌ಗೆ ₹50 ಲಕ್ಷ ದಂಡ ವಿಧಿಸಿ, ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

“ಅರ್ಜಿಗಳು ಅನೂರ್ಜಿತಗೊಂಡಿದ್ದು, ಟ್ವಿಟರ್‌ಗೆ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 45 ದಿನಗಳ ಒಳಗೆ ಕೆಎಸ್‌ಎಲ್‌ಎಸ್‌ಗೆ ಟ್ವಿಟರ್‌ ದಂಡದ ಮೊತ್ತವನ್ನು ಪಾವತಿಸಬೇಕು” ಎಂದು ಆದೇಶ.

Siddesh M S

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌, ಟ್ವಿಟರ್‌ಗೆ ಬರೋಬ್ಬರಿ ₹50 ಲಕ್ಷ ದಂಡ ವಿಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

ಸುದೀರ್ಘ ವಿಚಾರಣೆ ಬಳಿಕ ಏಪ್ರಿಲ್‌ 21ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

“ಅರ್ಜಿಗಳು ಅನೂರ್ಜಿತಗೊಂಡಿದ್ದು, ಟ್ವಿಟರ್‌ಗೆ ₹50 ಲಕ್ಷ ದಂಡ ವಿಧಿಸಲಾಗಿದೆ. 45 ದಿನಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಟ್ವಿಟರ್‌ ದಂಡದ ಮೊತ್ತವನ್ನು ಪಾವತಿಸಬೇಕು. ಇದನ್ನು ಪಾಲಿಸಲು ಟ್ವಿಟರ್‌ ವಿಫಲವಾದರೆ 45 ದಿನಗಳ ಬಳಿಕ ಪ್ರತಿದಿನ ಹೆಚ್ಚುವರಿಯಾಗಿ ₹5 ಸಾವಿರ ಪಾವತಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ.

“ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿನ ಕಾನೂನುಗಳನ್ನು ಪರಿಶೀಲಿಸಿದ್ದು, ಅವುಗಳನ್ನು ಹೋಲಿಕೆ ಮಾಡಿದ್ದೇನೆ. ಪ್ರತಿವಾದಿಗಳ ವಾದದಲ್ಲಿ ನನಗೆ ನಂಬಿಕೆ ಬಂದಿದೆ. ಆದೇಶ ಪಾಲಿಸದೇ ಇದ್ದಕ್ಕಿದ್ದಂತೇ ಟ್ವಿಟರ್‌ ನ್ಯಾಯಾಲಯದ ಕದ ತಟ್ಟಿದೆ. ಟ್ವಿಟರ್‌ ಬಿಲಿಯನ್‌ ಡಾಲರ್‌ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ” ಎಂದು ಪೀಠವು ಮೌಖಿಕವಾಗಿ ಹೇಳಿದೆ.

“ವಿಭಿನ್ನ ಸಂದರ್ಭದಲ್ಲಿ ಆದೇಶ ಪಾಲಿಸಿರುವ ದಾಖಲೆಗಳನ್ನೂ ಟ್ವಿಟರ್‌ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದಕ್ಕಾಗಿ ಅರ್ಜಿ ವಜಾ ಮಾಡಿ, ಟ್ವಿಟರ್‌ಗೆ ₹50 ಲಕ್ಷ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ವಾದಿಸಬಹುದು. ದಂಡ ವಿಧಿಸಲಾಗದು ಎಂದು ಟ್ವಿಟರ್‌ ವಾದಿಸಬಹುದು. ಈ ಸಂಬಂಧ ನಮಗೆ ವಾದಿಸಲು ಅವಕಾಶ ನೀಡಲಿಲ್ಲ ಎಂದು ಯಾರೂ ಹೇಳಬಾರದು, ಅದಕ್ಕಾಗಿ ಈಗ ಕೇಳುತ್ತಿದ್ದೇನೆ. ಒಟ್ಟು 8 ಪ್ರಶ್ನೆಗಳನ್ನು ರೂಪಿಸಿದ್ದು, ಅವುಗಳಿಗೆ ಉತ್ತರಿಸಿದ್ದೇನೆ. ಅರ್ಜಿದಾರರ ನಡತೆಯನ್ನು ಆದೇಶದಲ್ಲಿ ಚರ್ಚಿಸಲಾಗಿದೆ” ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಆದೇಶದ ವಿವರಣೆ ನೀಡಿದರು.

ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಮತ್ತು 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ನಿರ್ದೇಶಿಸಿತ್ತು. ಒಟ್ಟು 1,474 ಖಾತೆಗಳು ಮತ್ತು 175 ಟ್ವೀಟ್‌ಗಳ ಪೈಕಿ 39 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿರುವ ಆದೇಶವನ್ನು ಮಾತ್ರ ಟ್ವಿಟರ್‌ ಅರ್ಜಿಯಲ್ಲಿ ಪ್ರಶ್ನಿಸಿತ್ತು.  

ಟ್ವಿಟರ್‌ ಅರ್ಜಿಯನ್ನು ವಿರೋಧಿಸಿದ ಕೇಂದ್ರ ಸರ್ಕಾರದ ಪರ ವಕೀಲರು “ಟ್ವಿಟರ್ ತನ್ನ ಬಳಕೆದಾರರ ಪರವಾಗಿ ಸಮರ್ಥಿಸುವ ಹಕ್ಕನ್ನು ಹೊಂದಿಲ್ಲ. ಹೀಗೆ ಮಾಡಲು ಶಾಸನದ ಬೆಂಬಲ ಅಗತ್ಯವಿದೆ. ದಾವೆಯಲ್ಲಿ ಹಾಜರಾಗುವ ಹಕ್ಕಿನ ವಿಷಯವನ್ನು ಪರಿಗಣಿಸುವುದಾದರೆ ಟ್ವಿಟರ್‌ ಪ್ರಕರಣದಲ್ಲಿ ಬಾದಿತ ಪಕ್ಷಕಾರನೇ? ಎಲ್ಲ ಬಳಕೆದಾರರನ್ನು ಅದು ಬೆಂಬಲಿಸುತ್ತದೆಯೇ? ಟ್ವಿಟರ್‌ ಮತ್ತು ಅದರ ಬಳಕೆದಾರರ ನಡುವೆ ಯಾವುದೇ ಸದಸ್ಯತ್ವ ಅಥವಾ ಸಂಬಂಧದ ಪ್ರಶ್ನೆ ಉದ್ಭವಿಸುವುದಿಲ್ಲ. ಕೇಂದ್ರ ಸರ್ಕಾರವು ಸ್ವೇಚ್ಛೆಯಿಂದ ನಡೆದುಕೊಂಡರೆ ಮಾತ್ರ ಸಂವಿಧಾನದ 14ನೇ ವಿಧಿ ಅಡಿ ಹಕ್ಕು ಉಲ್ಲಂಘನೆ ಉಲ್ಲೇಖಿಸಿ ಟ್ವಿಟರ್‌ ನ್ಯಾಯಾಲಯದ ಕದತಟ್ಟಬಹುದು” ಎಂದು ವಾದಿಸಿದ್ದರು.

“ಸುಳ್ಳು ಸುದ್ದಿ ಮತ್ತು ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್‌ನಂಥ ವೇದಿಕೆಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ” ಎಂದು ವಾದಿಸಿದ್ದರು.

“ಸೂಕ್ಷ್ಮ ವಿಚಾರಗಳು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗುತ್ತದೆ. ನ್ಯಾಯಸಮ್ಮತ ಅಭಿಪ್ರಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಒಪ್ಪಿಗೆ ಇದ್ದರೂ ವ್ಯಂಗ್ಯದ ರೂಪದಲ್ಲಿನ ಟ್ವೀಟ್‌ಗಳು ಮತ್ತು ಮಾಹಿತಿಗಳು ಟ್ವಿಟರ್‌ನಲ್ಲಿ ವ್ಯಾಪಕವಾಗಿವೆ. ಇತರೆ ಸಾಮಾಜಿಕ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ ಸೀಮಿತ ಪದ ಮಿತಿ ಹೊಂದಿರುವ ಟ್ವಿಟರ್‌ ವ್ಯಾಪಕವಾಗಿ ತಪ್ಪು ಮಾಹಿತಿ ಪಸರಿಸಿರುವ ಶಕ್ತಿ ಹೊಂದಿದೆ” ಎಂದಿದ್ದರು.

ಟ್ವಿಟರ್‌ ಪರ ವಕೀಲರು “ಟ್ವಿಟರ್‌ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ನೂರಾರು, ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕಾನೂನಿನ ಅನ್ವಯ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ. ಆದರೆ, ತಮ್ಮ ಟ್ವಿಟರ್‌ ಹ್ಯಾಂಡಲ್‌ ನಿರ್ಬಂಧವಾದುದ್ದಕ್ಕೆ ವ್ಯಕ್ತಿಗತವಾಗಿ ಬಳಕೆದಾರರಿಗೆ ಯಾವುದೇ ಪರಿಹಾರ ಇರುವುದಿಲ್ಲ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ನಿರ್ಬಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ನಾವು ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. 1000ಕ್ಕೂ ಅಧಿಕ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಸರ್ಕಾರ ಆದೇಶ ಮಾಡಿದೆ. ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ" ಎಂದು ವಾದಿಸಿದ್ದರು.