ತನಿಖಾಧಿಕಾರಿಯಿಂದ ಪೊಲೀಸ್ ಕೇಸ್ ಡೈರಿಯನ್ನು ತರಿಸಿಕೊಳ್ಳುವಂತೆ ಕೋರುವ ಸ್ವತಂತ್ರ ಹಕ್ಕು ಆರೋಪಿಗೆ ಇಲ್ಲ. ನ್ಯಾಯಾಲಯಕ್ಕೆ ಪ್ರಕರಣದ ಪರಿಶೀಲನೆಗಾಗಿ ಅಗತ್ಯವೆನಿಸಿದರೆ ಮಾತ್ರ ಕೇಸ್ ಡೈರಿಯನ್ನು ತರಿಸಿಕೊಳ್ಳಬಹುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 91ರ ಅಡಿಯಲ್ಲಿ ಕೇಸ್ ಡೈರಿ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಲು ಕೋರಿ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಕಂದಾಯ ನಿರೀಕ್ಷಕ ರೆಡ್ಡಿ ಶಿವಾನಂದ ಸಿದ್ಧ ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಗೀತಾ ಕೆ ಬಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ನಾಗಲಮಡಿಕೆ ನಾಡಕಚೇರಿಯ ಉಪತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಕಂದಾಯ ವಿವಾದಕ್ಕೆ ಸಂಬಂಧಿಸಿದ ದಾಖಲೆಗಳು, ತಿರುಮಣಿ ಗ್ರಾಮದ ಸರ್ವೆ ನಂಬರ್ 103ರ 2020-23ನೇ ಸಾಲಿನ ಪಹಣಿಗಳು ಹಾಗೂ ಅದೇ ಜಮೀನಿನ ಎಂ ಆರ್ ಸಂಖ್ಯೆ ಎಚ್15ರ ದಾಖಲೆಯನ್ನು ತರಿಸಿಕೊಳ್ಳುವಂತೆ ಅರ್ಜಿದಾರರು ಕೋರಿದ್ದರು.
ಈ ದಾಖಲೆಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅವುಗಳ ಪ್ರಮಾಣೀಕೃತ ಪ್ರತಿಗಳನ್ನು ಅರ್ಜಿದಾರರೇ ಸಂಬಂಧಪಟ್ಟ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ಹೇಳಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿರುವುದರಿಂದ ಅವುಗಳ ಪ್ರತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರೆ ಅವುಗಳನ್ನು ಆರೋಪಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸುವುದು ಲೋಕಾಯುಕ್ತ ಪೊಲೀಸರ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
ಒಂದು ವೇಳೆ ಅಂತಹ ದಾಖಲೆಗಳನ್ನು ಆರೋಪಪಟ್ಟಿಯೊಂದಿಗೆ ಸಲ್ಲಿಸದಿದ್ದರೆ, ಅದನ್ನು ಆಧರಿಸಿ ಅಭಿಯೋಜನೆಯ ವಿರುದ್ಧ ಪ್ರತಿಕೂಲ ನಿರ್ಣಯಕ್ಕೆ ಬರಲು ಅವಕಾಶವಿದೆ. ಹೀಗಾಗಿ, ಆ ದಾಖಲೆಗಳನ್ನು ಪ್ರತ್ಯೇಕವಾಗಿ ತರಿಸಿಕೊಳ್ಳುವಂತೆ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಆರೋಪಿಯ ಕೋರಿಕೆಯ ಮೇರೆಗೆ ತನಿಖಾಧಿಕಾರಿಯಿಂದ ಕೇಸ್ ಡೈರಿಯನ್ನು ತರಿಸಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಲಾಗದು. ನ್ಯಾಯಾಲಯಕ್ಕೆ ಪರಿಶೀಲನೆಗಾಗಿ ಅಗತ್ಯವೆನಿಸಿದರೆ ಮಾತ್ರ ಕೇಸ್ ಡೈರಿಯನ್ನು ತರಿಸಿಕೊಳ್ಳಬಹುದು. ಅದನ್ನು ತನಿಖಾಧಿಕಾರಿಯಿಂದ ತರಿಸಿಕೊಳ್ಳುವ ಸ್ವತಂತ್ರ ಹಕ್ಕು ಆರೋಪಿಗೆ ಇಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, ಸೆಕ್ಷನ್ 91ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನೂ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ತುಮಕೂರಿನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿ ಶಿವಾನಂದ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7(ಬಿ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಪ್ರಕರಣದ ತನಿಖೆ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಗಿದ್ದು, ಸದ್ಯ ವಿಚಾರಣೆ ನಡೆಯುತ್ತಿದೆ.
ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಸಿಆರ್ಪಿಸಿ ಸೆಕ್ಷನ್ 227ರ ಅಡಿಯಲ್ಲಿ ಹಾಗೂ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳುವಂತೆ ಕೋರಿ ಸೆಕ್ಷನ್ 91ರ ಅಡಿಯಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಆದರೆ, ತುಮಕೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯವು 2024ರ ಮಾರ್ಚ್ 1ರಂದು ಎರಡೂ ಅರ್ಜಿಗಳನ್ನು ತಿರಸ್ಕರಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಶಿವಾನಂದ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.