Youth Congress president B V Srinivas and Bengaluru city civil court 
ಸುದ್ದಿಗಳು

ಕಿರುಕುಳ ಆರೋಪ: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆಂಗಳೂರು ನ್ಯಾಯಾಲಯ

ಅಸ್ಸಾಂನ ಕಾಮರೂಪ್‌ ಜಿಲ್ಲೆಯ ದಿಸ್‌ಪುರ್‌ ಠಾಣೆಯಲ್ಲಿ ಶ್ರೀನಿವಾಸ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294, 341, 352, 354, 354ಎ(iv), 506 ಮತ್ತು 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

Bar & Bench

ಅಸ್ಸಾಂ ಕಾಂಗ್ರೆಸ್‌ ಯುವಘಟಕದ ಉಚ್ಛಾಟಿತ ನಾಯಕಿಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಕರ್ನಾಟಕದವರಾದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅವರು ಜಾಮೀನು ಅಥವಾ ಪ್ರಕರಣದ ಸಂಬಂಧ ವ್ಯಾಪ್ತಿ ಹೊಂದಿರುವ ನ್ಯಾಯಾಲಯವನ್ನು ಸಂಪರ್ಕಿಸುವವರೆಗೆ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿ ಗುರುವಾರ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ 71 ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ ಎಸ್‌ ಜ್ಯೋತಿಶ್ರೀ ಅವರು ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸಂತ್ರಸ್ತೆಯ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಆದ ಸ್ವರೂಪ್‌ ಶ್ರೀನಿವಾಸ್‌ ಅವರ ಪರವಾಗಿ ಹಿರಿಯ ವಕೀಲ ಕೆ ಎಸ್‌ ಫಣೀಂದ್ರ ಅವರು “ಸಂತ್ರಸ್ತೆಯು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿರುವ ಹೇಳಿಕೆಯಲ್ಲಿ ಘಟನೆಯ ಕುರಿತು ವಿವರಿಸಿದ್ದಾರೆ. ಆರೋಪಿಯು ದೂರುದಾರೆಗೆ ಕಿರುಕುಳ ನೀಡಿದ್ದು, ಅವರನ್ನು ಅವಮಾನಿಸಿದ್ದಾರೆ. ಹೀಗಾಗಿ, ಸತ್ಯ ಹೊರಗೆಡವಲು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. ಆರೋಪಿಯು ಪ್ರಭಾವಿಯಾಗಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಅಸ್ಸಾಂ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಆರೋಪಿಯು ಗುವಾಹಟಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಆದರೆ, ಬೇರಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ಇಲ್ಲಿ ಹೇಳಿದ್ದಾರೆ. ಹೀಗಾಗಿ, ಆರೋಪಿಯ ಅರ್ಜಿ ವಜಾ ಮಾಡಬೇಕು” ಎಂದು ಕೋರಿದ್ದರು.

ಶ್ರೀನಿವಾಸ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ಅವರು “ರಾಜಕೀಯ ವಿರೋಧಿಗಳ ಜೊತೆ ಕೈಜೋಡಿಸಿ ಸಂತ್ರಸ್ತೆಯು ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ಕೊಡಿಸಲಾಗಿದೆ. ಅದಾಗ್ಯೂ, ದುರುದ್ದೇಶದಿಂದ ಆರೋಪ ಮಾಡಿದ್ದು, ಸಾಕಷ್ಟು ದಿನಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಅಸ್ಸಾಂ ಪೊಲೀಸರು ಬಂಧಿಸಲು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಶ್ರೀನಿವಾಸ್‌ ಅವರು ತನಿಖೆಗೆ ಹಾಜರಾಗುತ್ತಾರೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್‌ ಅವರು ಕಳೆದ ಆರು ತಿಂಗಳಿಂದ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಕಾಂಗ್ರೆಸ್‌ ಪದಾಧಿಕಾರಿಗಳಿಗೆ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. 2023ರ ಫೆಬ್ರವರಿ 25ರಂದು ಛತ್ತೀಸ್‌ಗಢದ ರಾಯಪುರದಲ್ಲಿನ ಮೇಫೇರ್ ಹೋಟೆಲ್‌ನಲ್ಲಿ ಹಲ್ಲೆ ನಡೆಸಿದ್ದು, ಕೆಟ್ಟ ಭಾಷೆ ಬಳಕೆ ಮಾಡಿದ್ದಾರೆ. ಇದಲ್ಲದೇ ಗುವಾಹಟಿಯಲ್ಲಿ ನೆಲೆಸಿದ್ದಾಗ ವಿವಿಧ ಸ್ವರೂಪದ ಬೆದರಿಕೆ ಹಾಕಿದ್ದಾರೆ. ತನ್ನ ನಿರ್ದೇಶನ ಪಾಲಿಸದಿದ್ದರೆ ಪಕ್ಷದ ಯಾವುದೇ ಸಭೆ-ಸಮಾರಂಭದಲ್ಲಿ ಭಾಗವಹಿಸಲು ಅಸ್ಸಾಂನಿಂದ ಹೊರಹೋಗದಂತೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ 2023ರ ಏಪ್ರಿಲ್‌ 19ರಂದು ಅಸ್ಸಾಂನ ಕಾಮರೂಪ್‌ ಜಿಲ್ಲೆಯಲ್ಲಿರುವ ದಿಸ್‌ಪುರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294, 341, 352, 354, 354ಎ(iv), 506 ಮತ್ತು 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.