BJP MLA Basanagowda Patil Yatnal and Karnataka HC 
ಸುದ್ದಿಗಳು

ತ್ಯಾಜ್ಯ ನದಿಗೆ ಬಿಡುಗಡೆ: ಶಾಸಕ ಯತ್ನಾಳ್‌ ಒಡೆತನದ ಸಿದ್ಧಸಿರಿ ಕಾರ್ಖಾನೆ ವಿರುದ್ಧದ ದೂರು ವಜಾ ಮಾಡಿದ ಹೈಕೋರ್ಟ್‌

ಸಿದ್ಧಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಯು ನೀರು ಮತ್ತು ಘನತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಮೂಲಕ ಜಲ ಹಾಗೂ ಪರಿಸರ ಕಾಯಿದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಕೆಎಸ್‌ಪಿಸಿಬಿ ದೂರು ದಾಖಲಿಸಿತ್ತು. 

Bar & Bench

ಸಂಸ್ಕರಣೆ ಮಾಡದೆ ತ್ಯಾಜ್ಯವನ್ನು ನದಿಗೆ ಬಿಡುಗಡೆ ಮಾಡುವ ಮೂಲಕ ಜಲ ಮತ್ತು ಪರಿಸರ ಕಾಯಿದೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಒಡೆತನದ ಮೆಸರ್ಸ್‌ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಸಕ್ಕರೆ ಕಾರ್ಖಾನೆ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಮೆಸರ್ಸ್‌ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಸಕ್ಕರೆ ಕಾರ್ಖಾನೆಯು ಎಥೆನಾಲ್‌ ವಿದ್ಯುತ್‌ ಸ್ಥಾವರದ ಘಟಕವನ್ನೂ ಹೊಂದಿದೆ. ಕಾರ್ಖಾನೆಯು ನೀರು ಮತ್ತು ಘನತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಮೂಲಕ ಜಲ ಕಾಯಿದೆ–1974ರ ಸೆಕ್ಷನ್‌ 43, 44 ಮತ್ತು 47 ಹಾಗೂ ಪರಿಸರ ಕಾಯಿದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯ ವಿರುದ್ಧ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಯತ್ನಾಳ್‌ ಪರವಾಗಿ ವಕೀಲ ವೆಂಕಟೇಶ್‌ ದಳವಾಯಿ ವಾದಿಸಿದ್ದರು.