ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸೇರಿದಂತೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರು ವೈಯಕ್ತಿಕ, ಖಾಸಗಿ, ಹಣಕಾಸು ಮತ್ತು ನಿಭಾಯಿಸುತ್ತಿರುವ ಕಾನೂನು ಸಮಸ್ಯೆಗಳ ಬಗ್ಗೆ ಯಾವುದೇ ಸುಳ್ಳು ಹಾಗೂ ಮಾನಹಾನಿಕಾರ ಹೇಳಿಕೆಗಳನ್ನು ನೀಡದಂತೆ ನಟ ಧನ್ವೀರ್ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು ಎಂದು ಕೋರಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಈ ದಾವೆಯಲ್ಲಿ ಧ್ವನೀರ್ ಪ್ರತಿವಾದಿಯಾಗಿದ್ದು, ದಾವೆಯನ್ನು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬೇಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ನಂತರ ಅವರ ಹಾಗೂ ಅವರ ಕುಟುಂಬ ಸದಸ್ಯರ ವಿಶ್ವಾಸವನ್ನು ಧನ್ವೀರ್ ಗಳಿಸಿದ್ದಾನೆ. ದರ್ಶನ್ ಎದುರಿಸುತ್ತಿರುವ ಕಾನೂನು ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತೇನೆ ಎಂದು ಧನ್ವೀರ್ ಹೇಳಿದ್ದರು. ಅದನ್ನು ನಂಬಿಸಿ ಆರಂಭದಲ್ಲಿ ಧನ್ವೀರ್ ಮತ್ತೆ ಮೇಲೆ ದರ್ಶನ್ ದಂಪತಿ ವಿಶ್ವಾಸ ಇಟ್ಟಿದ್ದರು. ಆದರೆ, ವಿಶ್ವಾಸ ಬೆಳೆಸಿಕೊಂಡ ನಂತರ ಧನ್ವೀರ್ ತಮ್ಮ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ವಂಚನೆ ಮತ್ತು ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರಿಂದ ವಿಜಯಲಕ್ಷ್ಮಿ ಅವರು ದರ್ಶನ್ ಎರಿಸುತ್ತಿರುವ ಕಾನೂನು ಸಮಸ್ಯೆಗಳನ್ನು ನೋಡಿಕೊಂಡರು ಎಂದು ದಾವೆಯಲ್ಲಿ ವಿವರಿಸಲಾಗಿದೆ.
ನಂತರ 2026ರ ಅಕ್ಟೋಬರ್ 10 ಅಥವಾ ಆ ದಿನ ಆಸುಪಾಸಿನಲ್ಲಿ ವಿವಿಧ ಸುದ್ದಿವಾಹಿನಿ, ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಧನ್ವೀರ್ ಹಾಜರಾಗಿದ್ದರು. ಈ ವೇಳೆ ದರ್ಶನ್ ಅವರನ್ನು ಜೈಲಿನಿಂದ ಹೊರ ಕರೆತರಲು ವಿಜಯಲಕ್ಷ್ಮಿ ಅವರಿಗೆ ಇಷ್ಟವಿಲ್ಲ. ದರ್ಶನ್ ಶಾಶ್ವತವಾಗಿ ಜೈಲಿನಲ್ಲಿ ಸೊರಗಬೇಕು ಎಂದು ಬಯಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಪ್ರದೋಷ್ ರಾವ್ ಅವರನ್ನು ವಿಜಯಲಕ್ಷ್ಮಿ ಮನವೊಲಿಸಿದ್ದಾರೆ ಮತ್ತು ಆತನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ದ್ವೇಷಪೂರಿತ, ಮಾನಹಾನಿಕಾರಕ, ಆಧಾರರಹಿತ ಮತ್ತು ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ಆಘಾತ ತರಿಸಿದೆ. ದರ್ಶನ್ ಮತ್ತು ಅವರ ಕುಟುಂಬದಲ್ಲಿ ಅವಿಶ್ವಾಸ ಮತ್ತು ಭಿನ್ನಾಭಿಪ್ರಾಯ ಮೂಡಿಸಬೇಕು ಎಂಬ ದುರುದ್ದೇಶದಿಂದಲೇ ಧನ್ವೀರ್ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ತಮ್ಮ ಮಾನಹಾನಿಯಾಗುತ್ತಿದೆ ಎಂದು ದರ್ಶನ್ ಮತ್ತು ವಿಜಯಲಕ್ಷ್ಮಿ ದಾವೆಯಲ್ಲಿ ಆಕ್ಷೇಪಿಸಿದ್ದಾರೆ.
ಇದರಿಂದ ಧನ್ವೀರ್, ಅವರ ಏಜೆಂಟ್, ಪ್ರತಿನಿಧಿಗಳು, ಕೆಲಸಗಾರರು, ಬೆಂಬಲಿಗರು ಅಥವಾ ಅವರ ಮೂಲಕ ಇಲ್ಲವೇ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಥವಾ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಯಾಗಲಿ, ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮೂಲಕ ತಮ್ಮ ಹಾಗೂ ತಮ್ಮ ವೈಯಕ್ತಿಕ, ಖಾಸಗಿ, ವೈವಾಹಿಕ, ಕುಟುಂಬ ಸದಸ್ಯರು, ಹಣಕಾಸು ಮತ್ತು ಕಾನೂನು ಅಥವಾ ರೇಣುಕಾಸ್ವಾಮಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಬಾರದು. ಆ ಹೇಳಿಕೆಗಳನ್ನು ಪ್ರಸಾರ ಮಾಡಬಾರದು ಹಾಗೂ ಸಂದರ್ಶನ ನೀಡಬಾರದು ಎಂಬುದಾಗಿ ಪ್ರತಿಬಂಧಕ ಆದೇಶ ಮಾಡಬೇಕು ಎಂದು ದರ್ಶನ್ ಮತ್ತು ವಿಜಯಲಕ್ಷ್ಮಿ ದಾವೆಯಲ್ಲಿ ಕೋರಿದ್ದಾರೆ.