ತಾನು ಹೊಂದಿದ್ದ ಬಂದೂಕು ಪರವಾನಗಿ ಅಮಾನತುಗೊಳಿಸಿ ಬೆಂಗಳೂರು ಉಪ ಪೊಲೀಸ್ ಆಯುಕ್ತರು (ಆಡಳಿತ) ಮಾಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ನಟ ದರ್ಶನ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಪಿಸ್ತೂಲ್ ಬಳಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮೂಲಕ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಂದೂಕು ಪರವಾಗಿ ರದ್ದುಪಡಿಸಲಾಗಿದೆ ಎಂದು ಜನವರಿ 20ರಂದು ಉಪ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದರು. ಇದನ್ನು ದರ್ಶನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಕುಟುಂಬ ಮತ್ತು ತನ್ನ ಸುರಕ್ಷತೆಯ ದೃಷ್ಟಿಯಿಂದ ಬಂದೂಕು ಪರವಾನಗಿ ಪಡೆದಿದ್ದು, ಪರವಾನಗಿ ಪಡೆಯಲು ಅಗತ್ಯವಾದ ನಿಯಮಗಳನ್ನು ಅನುಪಾಲಿಸಲಾಗಿದೆ. ಸಮಾಜದಲ್ಲಿ ತಾನು ಹೊಂದಿರುವ ಸ್ಥಾನಮಾನ ಪರಿಗಣಿಸಿ ಬಂದೂಕು ಪರವಾನಗಿ ನೀಡಲಾಗಿತ್ತು.
ಈ ಮಧ್ಯೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ಜನವರಿ 7ರಂದು ತನಗೆ ನೋಟಿಸ್ ನೀಡಿರುವ ಪೊಲೀಸರು, "ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ತಮ್ಮ ಬಳಿ ಇರುವ ಪರವಾನಗಿ ಇರುವ ಬಂದೂಕನ್ನು ಪ್ರಕರಣದ ಮೇಲೆ ಪ್ರಭಾವ ಬೀರಲು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಪರವನಾಗಿಯನ್ನು ಯಾಕೆ ಅಮಾನತು ಮಾಡಬಾರದು" ಎಂದು ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಇದಕ್ಕೆ ಜನವರಿ 13ರಂದು ಉತ್ತರಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಮುಗ್ಧನಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಂದರ್ಭ ನಿರ್ಮಾಣವಾಗುವುದಿಲ್ಲ. ಹೀಗಾಗಿ. ಪರವಾನಗಿ ಹೊಂದಿರುವ ಪಿಸ್ತೂಲ್ ದುರ್ಬಳಕೆಯಾಗುವುದಿಲ್ಲ. ಆದ್ದರಿಂದ ಷೋಕಾಸ್ ನೋಟಿಸ್ ಹಿಂಪಡೆಯಬೇಕು ಎಂದು ಕೋರಿದ್ದೆ. ಅಲ್ಲದೇ, ಜನವರಿ 16ರಂದು ಮತ್ತೊಂದು ಪತ್ರದ ಮೂಲಕ ಪಿಸ್ತೂಲ್ ದುರ್ಬಳಕೆ ಮಾಡುವುದಿಲ್ಲ. ಹೀಗಾಗಿ, ಪರವಾನಗಿ ರದ್ದತಿ ಮಾಡಬಾರದು ಎಂದು ಕೋರಿದ್ದಾಗಿಯೂ ದರ್ಶನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅದಾಗ್ಯೂ, ಪರವಾನಗಿ ಅಮಾನತುಗೊಳಿಸದ್ದಲ್ಲದೇ ಜನವರಿ 21ರಂದು ತನ್ನ ಬಳಿ ಇದ್ದ ಪಿಸ್ತೂಲ್ ಅನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ದುರುದ್ದೇಶದಿಂದ ಹಾಗೂ ತನಗೆ ಕಿರುಕುಳ ನೀಡುವ ಉದ್ದೇಶದಿಂದ ಪೊಲೀಸರು ಪಿಸ್ತೂಲ್ ಪರವಾನಗಿ ಅಮಾನತು ಮಾಡಿ, ವಶಕ್ಕೆ ಪಡೆದಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪರವಾನಗಿ ಇರುವ ಪಿಸ್ತೂಲ್ ಅನ್ನು ಬಳಕೆ ಮಾಡುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಇಂಥ ಆರೋಪವನ್ನು ದುರುದ್ದೇಶ ಮತ್ತು ಕೆಟ್ಟ ಅಭಿಪ್ರಾಯ ಮೂಡಿಸಲು ಮಾಡಲಾಗಿದೆ. ಯಾವುದೇ ಸಾಕ್ಷಿ ಇಲ್ಲದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಆಧಾರರಹಿತ ಆರೋಪ ಮಾಡಲಾಗಿದೆ ಎಂದು ವಾದಿಸಲಾಗಿದೆ.
ಒಂದೊಮ್ಮೆ ರೇಣುಕಾಸ್ವಾಮಿ ಪ್ರಕರಣದಲ್ಲಿ ತಾನು ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಕಂಡುಬಂದಿದ್ದರೆ ಸಂಬಂಧಿತರು ಅಥವಾ ಪ್ರಾಸಿಕ್ಯೂಷನ್ ಸಕ್ಷಮ ವೇದಿಕೆಯಲ್ಲಿ ದೂರು ದಾಖಲಿಸಬೇಕಾಗುತ್ತದೆ. ಇಲ್ಲಿ ಪ್ರತಿವಾದಿಗಳು ವ್ಯಕ್ತಪಡಿಸಿರುವ ಆತಂಕವು ಆಧಾರರಹಿತ ಮತ್ತು ಊಹಾತ್ಮಕವಾಗಿದೆ ಎಂದು ದರ್ಶನ್ ಆಕ್ಷೇಪಿಸಿದ್ದಾರೆ.
ಮುಂದುವರೆದು, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 17(3)(ಬಿ) ಅಡಿ ತನ್ನ ಪಿಸ್ತೂಲ್ ಪರವಾನಗಿ ಅಮಾನತುಗೊಳಿಸಲಾಗಿದೆ. ಆದರೆ, ಸೆಕ್ಷನ್ 17(3)(ಬಿ) ಅಡಿ ಸಾರ್ವಜನಿಕ ಶಾಂತಿ ಅಥವಾ ಸುರಕ್ಷತೆಗೆ ಭಂಗ ಉಂಟಾಗುವ ಸಾಧ್ಯತೆ ಕಂಡುಬಂದಾಗ ಪರವಾನಗಿ ಅಮಾನತುಗೊಳಿಸಬಹುದಾಗಿದೆ. ಆದರೆ, ಆಕ್ಷೇಪಿತ ಆದೇಶದಲ್ಲಿ ಅಂಥ ಯಾವುದೇ ಅಂಶಗಳನ್ನು ಉಲ್ಲೇಖಿಸಲಾಗಿಲ್ಲ. ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದ ಮಾತ್ರಕ್ಕೆ ಅಧಿಕಾರಿಗಳು ಪಿಸ್ತೂಲ್ ಪರವಾನಗಿ ಅಮಾನತುಗೊಳಿಸುವ ಅಧಿಕಾರ ಲಭ್ಯವಾಗದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದಲ್ಲದೇ, ಪಿಸ್ತೂಲ್ ಪರವಾನಗಿ ರದ್ದುಪಡಿಸುವಾಗ ಪೊಲೀಸರು ಷೋಕಾಸ್ ನೋಟಿಸ್ ನೀಡಿರುವುದನ್ನು ಹೊರತುಪಡಿಸಿ ತಮ್ಮ ವಾದವನ್ನು ಆಲಿಸಿಲ್ಲ. ಈ ನೆಲೆಯಲ್ಲಿ ಪೊಲೀಸರ ನಡೆಯು ಸ್ವೇಚ್ಛೆಯಿಂದ ಕೂಡಿರುವುದರಿಂದ ಆಕ್ಷೇಪಾರ್ಹ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಲಾಗಿದೆ. ಈ ಮಧ್ಯೆ, ಮಧ್ಯಂತರ ಪರಿಹಾರದ ಭಾಗವಾಗಿ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎನ್ನಲಾಗಿದೆ. ಮೆಸರ್ಸ್ ಲೀಗಲ್ ಇಂಕ್‌ನ ವಕೀಲ ಎಸ್ ಸುನೀಲ್‌ಕುಮಾರ್ ಅವರು ವಕಾಲತ್ತು ಹಾಕಿದ್ದಾರೆ.