Darshan and Karnataka HC 
ಸುದ್ದಿಗಳು

ಮನೆ ಊಟ, ಹಾಸಿಗೆ, ಬಟ್ಟೆ, ಪುಸ್ತಕ ಪಡೆಯಲು ಜೈಲು ಅಧಿಕಾರಿಗೆ ನಿರ್ದೇಶನ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ನಟ ದರ್ಶನ್‌

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಶ್ರೀನಿವಾಸ ಅವರು ಮನೆ ಊಟ ಪಡೆಯಲು ಅನುಮತಿಸುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲ್ವಿಚಾರಕರಿಗೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಜೀರ್ಣವಾಗುತ್ತಿಲ್ಲ. ಇದರಿಂದ ಅತಿಸಾರ/ಭೇದಿ ಆಗುತ್ತಿದೆ. ಇದರಿಂದ ದರ್ಶನ್‌ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಆಹಾರ ಸ್ವೀಕರಿಸಲು ಜೈಲು ಅಧಿಕಾರಿಗಳಿಗೆ ಈಗಾಗಲೇ ದರ್ಶನ್‌ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಜೈಲು ಅಧಿಕಾರಿಗಳು ಒಪ್ಪಿಲ್ಲ. ಈ ಕಾರಣದಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ಕರ್ನಾಟಕ ಬಂಧೀಖಾನೆ ಕಾಯಿದೆ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಮನೆಯಿಂದ ಆಹಾರ, ಹಾಸಿಗೆ, ಬಟ್ಟೆ, ಪುಸ್ತಕ ಇತ್ಯಾದಿ ವಸ್ತುಗಳನ್ನು ತರಿಸಿಕೊಳ್ಳಲು ಅವಕಾಶವಿದೆ. ಇದು ಕಾರಾಗೃಹ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕರು ಪರಿಶೀಲಿಸಿ ಅನುಮತಿಸುವುದಕ್ಕೆ ಒಳಪಟ್ಟಿರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ದರ್ಶನ್‌ ಅವರನ್ನು ಸಹ ಆರೋಪಿಗಳ ಹೇಳಿಕೆ ಆಧರಿಸಿ ಜೈಲಿನಲ್ಲಿ ಇಡಲಾಗಿದೆ. ಈ ನಡುವೆ, ದರ್ಶನ್‌ ನಿಯತ ಜಾಮೀನು ಪಡೆಯಲು ವಕೀಲರ ಮೂಲಕ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಒಂದಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಜೈಲು ಅಧಿಕಾರಿಗಳು ವಿಧಿಸುವ ಷರತ್ತಿಗೆ ಒಳಪಟ್ಟು ಮನೆಯ ಆಹಾರ, ಬೆಡ್‌, ಪುಸ್ತಕ, ಪತ್ರಿಕೆಗಳನ್ನು ಪಡೆಯಲು ಅನುಮತಿಸಿದರೆ ಅದು ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಉಂಟು ಮಾಡುವುದಿಲ್ಲ. ಮನೆಯ ಆಹಾರ ಪಡೆಯಲು ನಿರಾಕರಿಸುವ ಮೂಲಕ ಜೈಲು ಅಧಿಕಾರಿಗಳು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡಿದ್ದಾರೆ ಎಂದು ದರ್ಶನ್‌ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಗೆಳತಿ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯ ಮೂಲಕ ಅಶ್ಲೀಲ ಚಿತ್ರ/ವಿಡಿಯೊ ಕಳುಹಿಸಿದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಷೆಡ್‌ ಒಂದರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ 12 ದಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದರು. ಆನಂತರ 2024ರ ಜೂನ್ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ. ದರ್ಶನ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302, 120ಬಿ, 201, 364, 355, 384, 143, 147, 148 ಮತ್ತು 149 ಅಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ದರ್ಶನ್‌ ಪರವಾಗಿ ವಕೀಲ ಪ್ರವೀಣ್‌ ಎಂ ಟಿ ವಕಾಲತ್ತು ಹಾಕಿದ್ದಾರೆ.