Jayaprada 
ಸುದ್ದಿಗಳು

ಇಎಸ್ಐಸಿ ಬಾಕಿ ಪ್ರಕರಣ: ಆರು ತಿಂಗಳ ಜೈಲು ಶಿಕ್ಷೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜಯಪ್ರದಾ

ನೌಕರರ ರಾಜ್ಯ ವಿಮಾ ಕಾಯಿದೆಯಡಿ ತನ್ನ ಚಿತ್ರ ಮಂದಿರದ ನೌಕರರಿಗೆ ವೇತನ ಪಾವತಿಸಲು ವಿಫಲರಾಗಿದ್ದ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರಿಗೆ ಆಗಸ್ಟ್ 10 ರಂದು, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.

Bar & Bench

ತನ್ನ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳ ವಿಮಾ ಪಾಲಿನ ಹಣದ ಬಾಕಿ ಮೊತ್ತವನ್ನು ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತನಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆ ಪ್ರಶ್ನಿಸಿ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮಿಳುನಾಡಿನ ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) ಜಯಪ್ರದಾ ನೌಕರರ ವಿಮಾ ಕಂತಿನ ಬಾಕಿ ಪಾವತಿ ಮಾಡಬೇಕಿತ್ತು.

ಜಯಪ್ರದಾ ಒಡೆತನದ ಪ್ರಸ್ತುತ ನಿಷ್ಕ್ರಿಯಗೊಂಡಿರುವ ಚಿತ್ರಮಂದಿರದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) ಪಾವತಿಸಬೇಕಾದ ಶಾಸನಬದ್ಧ ಆದೇಶವನ್ನು ಪಾಲಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿತ್ತು.

ಜಯಪ್ರದಾ ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದ ನ್ಯಾ. ಜಯಚಂದ್ರನ್‌ ಈ ಸಂಬಂಧ ಪ್ರತಿ ಅಫಿಡವಿಟ್‌ ಸಲ್ಲಿಸಲು ಇಎಸ್‌ಐಸಿಗೆ ಒಂದು ವಾರದ ಕಾಲಾವಕಾಶ ನೀಡಿತು.

ಅಷ್ಟರೊಳಗೆ ಬಾಕಿ ಇರುವ ₹ 37.68 ಲಕ್ಷ ಪಾವತಿಸಬಹುದೇ ಎಂದು ಸ್ಪಷ್ಟಪಡಿಸುವಂತೆಯೂ ನ್ಯಾಯಮೂರ್ತಿಗಳು ಜಯಪ್ರದಾ ಪರ ವಕೀಲರನ್ನು ಕೇಳಿದರು.ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 11 ರಂದು ನಡೆಯಲಿದೆ.

ಇಎಸ್‌ಐ ಕಾಯಿದೆಯ ಸೆಕ್ಷನ್ 40ರ ಪ್ರಕಾರ, ಪ್ರಧಾನ ಉದ್ಯೋಗದಾತನು ಉದ್ಯೋಗದಾತರ ಕೊಡುಗೆಯ ಪಾಲನ್ನು ಮತ್ತು ಉದ್ಯೋಗಿಗಳ ಕೊಡುಗೆಯ ಪಾಲನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿಗಳ ವೇತನದಿಂದ ಆ ಕೊಡುಗೆಯ ಮೊತ್ತವನ್ನು ವಸೂಲಿ ಮಾಡಲು ಪ್ರಧಾನ ಉದ್ಯೋಗದಾತ ಅರ್ಹನಾಗಿರುತ್ತಾನೆ.