ಮಲಯಾಳಂ ಚಿತ್ರನಟ ದಿಲೀಪ್ ಪ್ರಮುಖ ಆರೋಪಿಯಾಗಿರುವ 2017ರಲ್ಲಿ ನಟಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ 'ಪಲ್ಸರ್ ಸುನಿ' ಎಂದು ಕರೆಯಲಾಗುವ ಸುನೀಲ್ ಎನ್ ಎಸ್ ಸಲ್ಲಿಸಿದ್ದ ಹತ್ತನೇ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ [ಸುನೀಲ್ ಎನ್ಎಸ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಮೇಲಿಂದ ಮೇಲೆ ಜಾಮೀನು ಅರ್ಜಿ ಸಲ್ಲಿಸುತ್ತಿರುವ ಸುನೀಲ್ ₹ 25,000 ದಂಡ ಪಾವತಿಸುವಂತೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ಸುನೀಲ್ ಅವರಿಗೆ ಸೂಚಿಸಿದರು. ಪ್ರಸ್ತುತ ಅರ್ಜಿ ಸಲ್ಲಿಸುವ ಕೇವಲ ಮೂರು ದಿನಗಳ ಹಿಂದೆ ಅವರ ಜಾಮೀನು ಅರ್ಜಿಯೊಂದನ್ನು ವಜಾಗೊಳಿಸಲಾಗಿತ್ತು.
ಆದೇಶದ ಪ್ರತಿ ಸ್ವೀಕರಿಸಿದ ಒಂದು ತಿಂಗಳೊಳಗೆ ಅರ್ಜಿದಾರ ಸುನಿ ಅವರು ಕೇರಳ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದಂಡದ ಮೊತ್ತ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಆ ಮೊತ್ತವನ್ನು ಮತ್ತು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾಧಿಕಾರಕ್ಕೆ ಸ್ವಾತಂತ್ರ್ಯ ಇದೆ ಎಂದು ನ್ಯಾಯಾಲಯ ತಿಳಿಸಿದೆ.
ಸುನೀಲ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳು ಕ್ಷುಲ್ಲಕ ಆಧಾರದಲ್ಲಿದ್ದು ಜಾಮೀನು ನೀಡಬೇಕೆಂಬ ವಿಚಾರದಲ್ಲಿ ನ್ಯಾಯಾಲಯ ಮರುಪರಿಶೀಲನೆ ನಡೆಸುವ ಅಗತ್ಯವಿಲ್ಲದಿದ್ದರೂ ಒಂದರ ನಂತರ ಒಂದರಂತೆ ಜಾಮೀನು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
2017ರಲ್ಲಿ, ದುಷ್ಕರ್ಮಿಗಳ ಗುಂಪೊಂದು ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ವಾಹನದಲ್ಲಿ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿತ್ತು. ನಟ ದಿಲೀಪ್ ಅವರ ವಿವಾಹ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ನಟ ದಾಳಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸುನೀಲ್ ಪ್ರಮುಖ ಆರೋಪಿಯಾಗಿದ್ದಾರೆ.