ಕೇರಳದ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಕಳೆದ ತಿಂಗಳು ಶಿಕ್ಷೆಗೊಳಗಾದ ಪ್ರಮುಖ ಆರೋಪಿ ಸುನಿಲ್ ಎನ್ ಎಸ್ ಅಲಿಯಾಸ್ ಪಲ್ಸರ್ ಸುನಿ ತನ್ನ ವಿರುದ್ಧದ ದೋಷ ನಿರ್ಣಯ ಮತ್ತು ತನಗೆ ವಿಧಿಸಲಾಗಿರುವ 20 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ [ಸುನಿಲ್ ಎನ್ಎಸ್ @ ಪಲ್ಸರ್ ಸುನಿ vs ಕೇರಳ ರಾಜ್ಯ].
ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಮಾರ್ಟಿನ್ ಆಂಟನಿ, ಸಲೀಮ್ ಅಲಿಯಾಸ್ ವಡಿವಾಲ್ ಸಲೀಂ ಮತ್ತು ಪ್ರದೀಪ್ ಇದೇ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬೆನ್ನಿಗೇ ಸುನಿ ಸಹ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾನೆ.
ಸಾಮೂಹಿಕ ಅತ್ಯಾಚಾರ ಎಸಗಿದ್ದಕ್ಕಾಗಿ ಡಿಸೆಂಬರ್ 2025ರಲ್ಲಿ ಮೇಲಿನ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು, ಅಲ್ಲದೆ ಕೃತ್ಯದಲ್ಲಿ, ಅವರು ತಪ್ಪಿತಸ್ಥರೆಂದು ಕಂಡುಬಂದ ವಿವಿಧ ಅಪರಾಧಗಳಿಗೆ ಅನುಗುಣವಾಗಿ ಶಿಕ್ಷೆ ಮತ್ತು ದಂಡಗಳನ್ನು ವಿಧಿಸಿತ್ತು.
ಆಂಟನಿ, ವಡಿವಾಲ್ ಸಲೀಂ ಮತ್ತು ಪ್ರದೀಪ್ ಸಲ್ಲಿಸಿದ ಮೇಲ್ಮನವಿಗಳು ಫೆಬ್ರವರಿ 4, 2026 ರಂದು ವಿಚಾರಣೆಗೆ ಬರಲಿವೆ. ಸುನಿಯ ಮೇಲ್ಮನವಿ ಇನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ.
ಪ್ರಕರಣವು 2017ನೇ ಇಸವಿಯಲ್ಲಿ ಕೇರಳದ ಪ್ರಮುಖ ನಟಿಯೊಬ್ಬರನ್ನು ಅಪಹರಿಸಿ ಚಲಿಸುತ್ತಿದ್ದ ವಾಹನದಲ್ಲಿ ಅತ್ಯಾಚಾರ ಎಸಗಿದ ಮತ್ತು ಹಲ್ಲೆಯ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದ ಘಟನೆಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಎರ್ನಾಕುಲಂನ ಪ್ರಧಾನ ಸೆಷನ್ಸ್ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದ ಆರು ಜನರಲ್ಲಿ ಸುನಿ ಒಬ್ಬನಾಗಿದ್ದಾನೆ.
ಪ್ರಾಸಿಕ್ಯೂಷನ್ ಪ್ರಕಾರ, ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ನಟ ದಿಲೀಪ್ ಜೊತೆಗೂಡಿ ಸುನಿ ಸಂಚು ರೂಪಿಸಿದ್ದ. ನಟಿಯನ್ನು ಅವಮಾನಿಸುವ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಕೈಗೊಳ್ಳಲಾಗಿತ್ತು.
ಗಮನಾರ್ಹ ಅಂಶವೆಂದರೆ, ನಟ ದಿಲೀಪ್ ಅವರನ್ನು ವಿಚಾರಣಾ ನ್ಯಾಯಾಲಯವು ಆರೋಪಗಳಿಂದ ಖುಲಾಸೆಗೊಳಿಸಿದೆ. ಆದರೆ, ಸುನಿ ಮತ್ತು ಇತರ ಸಹ-ಆರೋಪಿಗಳು ನಕಲಿ ರಸ್ತೆ ಅಪಘಾತವನ್ನು ಸೃಷ್ಟಿಸಿ, ಬದುಕುಳಿದವರನ್ನು ಅಪಹರಿಸಿ, ವಾಹನದಲ್ಲಿ ಬಂಧಿಸಿ, ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯವನ್ನು ಅವರ ಗುರುತನ್ನು ಸ್ಪಷ್ಟವಾಗಿ ಬಹಿರಂಗಪಡಿಸಲು ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಕೃತ್ಯದ ನಂತರ ಸುನಿ ಈ ದೃಶ್ಯಗಳನ್ನು ಪ್ರಸರಣ ಮಾಡಿದ್ದ. ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದ. ಅಲ್ಲದೆ, ಹಲ್ಲೆಯ ರೆಕಾರ್ಡ್ ಮಾಡಿದ ದೃಶ್ಯಗಳನ್ನು ಬಳಸಿಕೊಂಡು ಜೈಲಿನಿಂದ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ತಮ್ಮ ಮೇಲ್ಮನವಿಯಲ್ಲಿ, ಸುನಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. "ತನಿಖೆಯು ಗಂಭೀರ ಕಾರ್ಯವಿಧಾನದ ಲೋಪಗಳಿಂದ ಕೂಡಿದೆ. ಎಫ್‌ಐಆರ್ ದಾಖಲಿಸುವಲ್ಲಿ ವಿವರಿಸಲಾಗದ ವಿಳಂಬವುಂಟಾಗಿದೆ. ಮೇಲ್ಮನವಿದಾರರನ್ನು ಅಕ್ರಮ ಮತ್ತು ನಿಯಮಬಾಹಿರವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ, ಗುರುತು ಪತ್ತೆಹಚ್ಚೆಗೆ ಮಾನ್ಯವಾದ ರೀತಿಯಲ್ಲಿ ಪೆರೇಡ್ ನಡೆಸುವಲ್ಲಿ ವೈಫಲ್ಯ ಉಂಟಾಗಿದೆ. ಭೌತಿಕ ಸಾಕ್ಷ್ಯಗಳ ನಿಗ್ರಹಿಸಲಾಗಿದ್ದು, ಜೈವಿಕ ಮತ್ತು ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ. ಈ ದೋಷಗಳು ಪ್ರಾಸಿಕ್ಯೂಷನ್ ಪ್ರಕರಣದ ಮೂಲಕ್ಕೆ ಹೋಗುತ್ತವೆ ಮತ್ತು ಶಿಕ್ಷೆಯನ್ನು ಸಮರ್ಥನೀಯವಲ್ಲದಂತೆ ಮಾಡುತ್ತವೆ" ಎಂದು ಮೇಲ್ಮನವಿಯಲ್ಲಿ ವಾದಿಸಿದ್ದಾನೆ.
ತನ್ನನ್ನು ಸಾಕ್ಷಿಗಳು ಗುರುತಿಸಿರುವ ರೀತಿಯು ವಿಶ್ವಾಸಾರ್ಹವಾಗಿಲ್ಲ, ಅವರ ಗುರುತಿಸುವಿಕೆಯು ಪೊಲೀಸ್ ಛಾಯಾಚಿತ್ರಗಳು ಹಾಗೂ ಮಾಧ್ಯಮ ಬಹಿರಂಗಪಡಿಸುವಿಕೆಯಿಂದ ಪ್ರಭಾವಿತವಾಗಿದೆ ಎಂದು ಸುನಿ ವಾದಿಸಿದ್ದನೆ. ಘಟನೆಗೆ ಸಂಬಂಧಿಸಿದಂತೆ ಸಾಕ್ಷಿಗಳ ಸಾಕ್ಷ್ಯಗಳಲ್ಲಿ ಗಂಭೀರ ವಿರೋಧಾಭಾಸಗಳಿವೆ ಎಂದು ವಾದಿಸಿದ್ದಾನೆ..