Gautam Adani, Supreme Court and SEBI logo
Gautam Adani, Supreme Court and SEBI logo A1
ಸುದ್ದಿಗಳು

ಹಿಂಡೆನ್‌ಬರ್ಗ್‌: ಅದಾನಿ ಸಮೂಹ ವಿರುದ್ಧದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಇನ್ನೂ15 ದಿನ ಕಾಲಾವಕಾಶ ಕೋರಿದ ಸೆಬಿ

Bar & Bench

ಅದಾನಿ ಸಮೂಹದ ವಿರುದ್ಧ ಹಿಂಡೆನ್‌ ಬರ್ಗ್‌ ರಿಸರ್ಚ್‌ ಮಾಡಿದ್ದ ಷೇರು ತಿರುಚುವಿಕೆ ಆರೋಪಗಳಿಗೆ ಸಂಬಂಧಿಸಿದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಈ ಹಿಂದೆ ನೀಡಿದ್ದ ಕಾಲಾವಕಾಶವನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ತಾನು ತನಿಖೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಈ ಯತ್ನಕ್ಕೆ ಸಹಕಾರಿಯಾಗುವಂತೆ ವಿದೇಶಿ ಸಂಸ್ಥೆಗಳಿಂದ ಮಾಹಿತಿ ನಿರೀಕ್ಷಿಸುತ್ತಿರುವುದಾಗಿ ಸೆಬಿ ಹೇಳಿದೆ.

ಕಳೆದ ಮೇ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅದಾನಿ ಸಮೂಹ ಮತ್ತು ಹಿಂಡೆನ್‌ ಬರ್ಗ್‌ ವರದಿಯ ಸುತ್ತಲಿನ ವಿವಾದದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೆಬಿಗೆ ಇಂದಿನವರೆಗೆ (ಆ. 14) ಕಾಲಾವಕಾಶ ನೀಡಿತ್ತು.

ಮೇ 2ಕ್ಕೆ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಕಳೆದ ಮಾರ್ಚ್ 2ರಂದು ಸೂಚಿಸಿತ್ತು. ಆದರೆ ಪ್ರಕರಣ ಹೆಚ್ಚು ಸಂಕೀರ್ಣಮಯವಾಗಿದೆ ಎಂದಿದ್ದ ಸೆಬಿ ಹೆಚ್ಚಿನ ಸಮಯಾವಕಾಶ ಕೇಳಿತ್ತು.  

ಮೇ ತಿಂಗಳಲ್ಲಿ ನಡೆದ ವಿಚಾರಣೆ ವೇಳೆ ಸೆಬಿ ಕೋರಿದ್ದ ಆರು ತಿಂಗಳ ಕಾಲಾವಕಾಶಕ್ಕೆ ಬದಲಾಗಿ ಮೂರು ತಿಂಗಳೊಳಗೆ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಆಗಸ್ಟ್ 14ರೊಳಗೆ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಗಡುವು ವಿಧಿಸಿತ್ತು.

ಷೇರು ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ವಂಚನೆ ಎಸಗಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಹಿಂಡೆನ್‌ ಬರ್ಗ್‌ ನೀಡಿದ ವರದಿಯಿಂದಾಗಿ ಅದಾನಿ ಕಂಪೆನಿಗಳ ಮೌಲ್ಯ 100 ಬಿಲಿಯನ್ ಡಾಲರ್‌ ಕುಸಿತ ಕಂಡಿದ್ದು ವರದಿಯಾಗಿತ್ತು.


ಕಳೆದ 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಸೆಬಿ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು. ಕಡೆಗೆ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದು ಸೆಬಿ ನಡೆಸುತ್ತಿರುವ ಈಗಿನ ತನಿಖೆಗಿಂತ ಪ್ರತ್ಯೇಕವಾದುದಾಗಿದೆ. ಈ ತಜ್ಞರ ಸಮಿತಿ ವರದಿ ಸಲ್ಲಿಸಿದ ಸಂದರ್ಭದಲ್ಲಿ ಸೆಬಿ ಕಾಲಾವಕಾಶ ಕೋರಿತ್ತು.