Karnataka High Court
Karnataka High Court 
ಸುದ್ದಿಗಳು

ಇಡಬ್ಲುಎಸ್‌ ಸಮುಚ್ಚಯ ನಿರ್ಮಾಣದ ಹೆಚ್ಚುವರಿ ಜಾಗ ಗುತ್ತಿಗೆದಾರ ಸಂಸ್ಥೆಗೆ ನೀಡಲಾಗದು: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Bar & Bench

ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ (ಇಡಬ್ಲುಎಸ್) ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯದ ಆವರಣದಲ್ಲಿ ವಾಣಿಜ್ಯ ಉದ್ದೇಶಕ್ಕೆ ಮೀಸಲಿಟ್ಟಿರುವ ಹೆಚ್ಚುವರಿ ಜಾಗವನ್ನು ಗುತ್ತಿಗೆದಾರ ಸಂಸ್ಥೆಗೆ ನೀಡಲಾಗದು ಎಂದು ಸ್ಪಷ್ಟಪಡಿಸಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಅಫಿಡವಿಟ್‌ ಸಲ್ಲಿಸಿದೆ.

ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಕರ್ನಾಟಕ ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ವಕೀಲರು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ರವಿಕುಮಾರ್ ಸಲ್ಲಿಸಿರುವ ಅಫಿಡವಿಟ್‌ ಅನ್ನು ಪೀಠಕ್ಕೆ ಸಲ್ಲಿಸಿದರು. ಇಡಬ್ಲುಎಸ್ ವಸತಿ ಸಮುಚ್ಚಯದ ಆವರಣದಲ್ಲಿ ವಾಣಿಜ್ಯ ಉದ್ದೇಶಕ್ಕೆ ಮೀಸಲಿಟ್ಟಿರುವ ಹೆಚ್ಚುವರಿ ಜಾಗವನ್ನು (ಬಳಕೆ ಮಾಡಲಾಗದ ಫ್ಲೋರ್ ಅಸೆಸ್‌ಮೆಂಟ್ ರೇಶ್ಯೂ) ಅನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗದು. ಇಡಬ್ಲುಎಸ್ ವಸತಿ ಸಮುಚ್ಚಯ ನಿರ್ಮಾಣದ ಇಡೀ ಯೋಜನೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುವುದು. ಪ್ರಕರಣದಲ್ಲಿ ಮಾರ್ಗದರ್ಶನ ಕೋರಿ 2022ರ ಡಿಸೆಂಬರ್‌ 20ರಂದು ಬಿಬಿಎಂಪಿ ಮತ್ತು ಬಿಡಿಎ ಸಲ್ಲಿಸಿರುವ ಮನವಿಗಳ ಬಗ್ಗೆ ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2023ರ ಜನವರಿ 6ರಂದು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಅದರಲ್ಲಿ ಎಲ್ಲ ಪ್ರತಿನಿಧಿಗಳು ಭಾಗಿಯಾಗಿದ್ದರು ಹಾಗೂ ಬಿಡಿಎ, ಬಿಬಿಎಂಪಿಗಳ ಪ್ರಸ್ತಾವನೆಯ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನು ಪರಿಗಣಿಸಿದ ನ್ಯಾಯಾಲಯವು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿ ಗುತ್ತಿಗೆದಾರ ಸಂಸ್ಥೆಯಾದ ಮೇವರಿಕ್ಸ್ ಹೋಲ್ಡಿಂಗ್ ಪ್ರೈವೇಟ್‌ ಲಿಮಿಟೆಡ್‌ಗೆ ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದೆ.