ಸುದ್ದಿಗಳು

ಆದಿಚುಂಚನಗಿರಿ ಶಾಖಾ ಮಠದ ಕೃಪಾನಂದನಾಥ ಸ್ವಾಮೀಜಿ ಬೆತ್ತಲೆ ವಿಡಿಯೊ ಚಿತ್ರೀಕರಣ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ

Bar & Bench

ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಕೃಪಾನಂದನಾಥ ಸ್ವಾಮೀಜಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬೆತ್ತಲಾಗಿದ್ದ ವಿಡಿಯೊ ಚಿತ್ರೀಕರಿಸಿ ₹4 ಕೋಟಿ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ರಾಮನಗರದ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕೃಪಾನಂದನಾಥ ಸ್ವಾಮೀಜಿ ದೂರು ಆಧರಿಸಿ ರಾಮನಗರ ಗ್ರಾಮೀಣ ಪೊಲೀಸರು ಮಾರ್ಚ್‌ 29ರಂದು ರವಿಕುಮಾರ್‌, ಲಿಖಿತ್‌ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 384 (ಸುಲಿಗೆ) ಜೊತೆಗೆ 34ರ ಅಡಿ ಎಫ್‌ಐಆರ್‌ ದಾಖಲಿಸಿದ್ದರು.

ಇದರ ಆಧಾರದ ಮೇಲೆ ರವಿಕುಮಾರ್‌, ಲಿಖಿತ್‌ ಮತ್ತು ಸ್ವರೂಪ್‌ ಎಂಬವರನ್ನು ಬಂಧಿಸಿ, ಪೊಲೀಸರು ಮಾರ್ಚ್‌ 31ರಂದು ರಾಮನಗರದ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಗುಲ್ಜರ್‌ಲಾಲ್‌ ಡಿ. ಮಹಾವರ್ಕರ್‌ ಅವರ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ದೂರಿನಲ್ಲಿ ಏನಿದೆ?: “ಈಚೆಗೆ ನನಗೆ ಚರ್ಮದ ಅಲರ್ಜಿ ಆಗಿತ್ತು. ವೈದ್ಯರ ಸಲಹೆ ಮೇರೆಗೆ ದಿನ ಬೆಳಿಗ್ಗೆ ಹಾಗೂ ಸಂಜೆ ದೇಹಕ್ಕೆ ಔಷಧ ಹಚ್ಚಿಕೊಂಡು ಮಲಗುತ್ತಿದ್ದೆ. ಈ ವಿಚಾರ ತಿಳಿದವರು ನನ್ನ ಕೊಠಡಿಯಲ್ಲಿ ಕ್ಯಾಮೆರಾ ಇಲ್ಲವೇ ಮೊಬೈಲ್‌ ಇಟ್ಟು ನಾನು ಬೆತ್ತಲಾಗಿರುವ ಚಿತ್ರೀಕರಣ ಮಾಡಿದ್ದಾರೆ. ಮಾರ್ಚ್‌ 20ರಂದು ಸಂಜೆ ರವಿಕುಮಾರ್ ಎಂಬ ವ್ಯಕ್ತಿ ಮಠದಲ್ಲಿನ ನನ್ನ ಕೊಠಡಿಗೆ ಬಂದು ನನ್ನ ವಿಡಿಯೊ ತೋರಿಸಿ ₹4 ಕೋಟಿಗೆ ಬೇಡಿಕೆ ಇಟ್ಟರು. ಕೇಳಿದಷ್ಟು ಹಣ ಕೊಡದೇ ಹೋದರೆ ₹4 ಲಕ್ಷ ಕೊಟ್ಟು ಇದೇ ವಿಡಿಯೊಗಳನ್ನು ಬೇಕಾದಂತೆ ಎಡಿಟ್‌ ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದರು. ನಂತರದಲ್ಲಿಯೂ ನಿರಂತರವಾಗಿ ನನ್ನ ಮೊಬೈಲ್‌ಗೆ ಬ್ಲಾಕ್‌ಮೇಲ್‌ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಒಡ್ಡಿದ್ದಾರೆ” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

“ನನ್ನ ಕೊಠಡಿಗೆ ಆಗಾಗ್ಗೆ ಬರುತ್ತಿದ್ದ ಲಿಖಿತ್ ಎಂಬ ವ್ಯಕ್ತಿ ಈ ವಿಡಿಯೊ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಇದರಿಂದ ನನಗೆ ಮಾನಸಿಕವಾಗಿ ನೋವಾಗಿದೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.