Adipurush
Adipurush 
ಸುದ್ದಿಗಳು

ಆದಿಪುರುಷ್: ಕೇಂದ್ರ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯ ಕ್ರಮ ತೆಗೆದುಕೊಳ್ಳಬಹುದೇ ಎಂದು ಕೇಳಿದ ಅಲಾಹಾಬಾದ್ ಹೈಕೋರ್ಟ್

Bar & Bench

ಆದಿಪುರುಷ್‌ ಚಲನಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ  ಸಿನಿಮಾಟೋಗ್ರಾಫ್ ಕಾಯಿದೆ 1952ರ ಸೆಕ್ಷನ್ 6ರ ಅಡಿಯಲ್ಲಿ ತನ್ನಮರುಪರಿಶೀಲನಾ ಅಧಿಕಾರ ಬಳಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್ ಮಂಗಳವಾರ ಸೂಚಿಸಿದೆ [ಕುಲದೀಪ್‌ ತಿವಾರಿ ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಚಲನಚಿತ್ರ ಪ್ರದರ್ಶನ ವರ್ಗವನ್ನು ಬದಲಾಯಿಸುವ ಅಥವಾ ನಿರ್ಬಂಧಿಸುವ ಇಲ್ಲವೇ ಪ್ರದರ್ಶನ ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಅಧಿಕಾರಗಳನ್ನು ಕಾಯಿದೆಯ ನಿಯಮಾವಳಿ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ಪೂಜ್ಯ ಮಹಾಕಾವ್ಯ ರಾಮಾಯಣದ ಸಮಗ್ರತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಎಂಬ ಕಳವಳದ ಹಿನ್ನೆಲೆಯಲ್ಲಿ ಅರ್ಜಿದಾರರು ಚಲನಚಿತ್ರ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇಂದು ಮಧ್ಯಾಹ್ನ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಸಂಪೂರ್ಣ ಸೂಚನೆಗಳನ್ನು ಪಡೆಯಲು ಉಪ ಸಾಲಿಸಿಟರ್‌ ಜನರಲ್‌ ಅವರಿಗೆ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀ ಪ್ರಕಾಶ್ ಸಿಂಗ್   ನಿರ್ದೇಶನ ನೀಡಿತು.

ಚಿತ್ರದ ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕೂಡ ಪ್ರಕರಣದ ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಶುಕ್ಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಹಾಗೂ ಹಿರಿಯ ನ್ಯಾಯವಾದಿ ಎಸ್‌ ಬಿ ಪಾಂಡೆ ಅವರು ಸತ್ಯಾಸತ್ಯತೆ ಪರಿಶೀಲಿಸಲು ಮತ್ತು ಸೂಕ್ತ ಪ್ರಾಧಿಕಾರದಿಂದ ಸೂಚನೆಗಳನ್ನು ಪಡೆಯಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿತು. ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನಾ ಅಧಿಕಾರ ಇದೆ ಎಂದು ಪಾಂಡೆ ಅವರು ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.