Adipurush 
ಸುದ್ದಿಗಳು

ರಾಮ-ರಾವಣರ ಪಾತ್ರವಿದ್ದರೂ ರಾಮಾಯಣವಲ್ಲ ಎಂದರೆ ಜನರು ಒಪ್ಪುವರೆ? ಆದಿಪುರುಷ್‌ ಕುರಿತು ಅಲಾಹಾಬಾದ್ ಹೈಕೋರ್ಟ್ ಪ್ರಶ್ನೆ

ʼಚಿತ್ರ ರಾಮಾಯಣ ಕುರಿತದ್ದಲ್ಲ ಎನ್ನಲು ಚಿತ್ರದ ಹಕ್ಕುತ್ಯಾಗ ವಿವರಣೆಯೊಂದೇ ಸಾಕೆ ಎಂದು ನ್ಯಾಯಾಲಯ ಕೇಳಿತು.

Bar & Bench

ಆದಿಪುರುಷ್‌ ಚಲನಚಿತ್ರ ಕುರಿತಂತೆ ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆಯುತ್ತಿದ್ದ ವಿಚಾರಣೆ ವೇಳೆ ನ್ಯಾಯಾಲಯ ಸ್ವಾರಸ್ಯಕರ ಪ್ರಶ್ನೆಯೊಂದನ್ನು ಚಿತ್ರತಂಡದ ಮುಂದಿಟ್ಟಿತು. ರಾಮ, ಸೀತೆ, ರಾವಣರ ಪಾತ್ರವಿದ್ದರೂ ಚಿತ್ರದ ಹಕ್ಕು ತ್ಯಾಗ ಒಕ್ಕಣೆ ಇದನ್ನು ರಾಮಾಯಣದ ಕತೆಯಲ್ಲ ಎಂದು ಜನರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತದೆ ಎಂಬುದಾಗಿ ನ್ಯಾಯಾಲಯ ಪ್ರಶ್ನಿಸಿತು [ಕುಲದೀಪ್‌ ತಿವಾರಿ ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ವಿಚಾರಣೆಯ ಒಂದು ಹಂತದಲ್ಲಿ ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಹಾಗೂ ಹಿರಿಯ ನ್ಯಾಯವಾದಿ ಎಸ್‌ ಬಿ ಪಾಂಡೆ  ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಈಗಾಗಲೇ ತಾನು ನೀಡಿರುವ ಪ್ರಮಾಣಪತ್ರವನ್ನು ಮರುಪರಿಶೀಲನೆ ಮಾಡದಿರಬಹುದು. ಅಷ್ಟಕ್ಕೂ ಇದು ರಾಮಾಯಣದ ಕತೆಯಲ್ಲ ಎಂದು ಚಿತ್ರದ ಹಕ್ಕುತ್ಯಾಗ ಒಕ್ಕಣೆಯಲ್ಲಿ ವಿವರಿಸಲಾಗಿದೆ ಎಂದರು.

ಆದರೆ ʼಈ ಚಿತ್ರ ರಾಮಾಯಣ ಕುರಿತದ್ದಲ್ಲ ಎನ್ನಲು ಚಿತ್ರದ ಹಕ್ಕುತ್ಯಾಗ ವಿವರಣೆಯೊಂದೇ ಸಾಕೆ ಎಂದು ನ್ಯಾಯಾಲಯ ಕೇಳಿತು.

“ಚಿತ್ರ ನಿರ್ಮಾತೃಗಳು ಭಗವಾನ್‌ ರಾಮ, ಸೀತಾ ದೇವಿ, ಭಗವಾನ್‌ ಲಕ್ಷ್ಮಣ, ಭಗವಾನ್‌ ಹನುಮಂತ, ರಾವಣ ಲಂಕೆ ಇತ್ಯಾದಿ ವಿವರಗಳನ್ನು ತೋರಿಸಿರುವಾಗ ಚಿತ್ರದ ಹಕ್ಕುತ್ಯಾಗದ ಒಕ್ಕಣೆ ಇದನ್ನು ರಾಮಾಯಣದ ಕತೆಯಲ್ಲ ಎಂದು ಜನರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತದೆ” ಎಂದು ನ್ಯಾಯಾಲಯ ಪ್ರಶ್ನಿಸಿತು.