ಸುದ್ದಿಗಳು

ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ: ಜಸ್ಟ್‌ ಡಯಲ್‌, ಅಮೆಜಾನ್‌ಗಳಿಂದ ಮಾಹಿತಿ, ಸಾಮಗ್ರಿ ಪಡೆದಿದ್ದ ದೋಷಿ ಆದಿತ್ಯ

Bar & Bench

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್‌ ಅನ್ನು ದೋಷಿ ಎಂದು ಪರಿಗಣಿಸಿದ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿತು. ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ರೂ. 20,000 ಸಾವಿರ ದಂಡ ವಿಧಿಸಲಾಯಿತು. ತೀರ್ಪಿನಲ್ಲಿ ದೋಷಿ ಆದಿತ್ಯ ರಾವ್‌ ವಿರುದ್ಧ ಆರೋಪವನ್ನು ನಿರೂಪಿಸಲು ತನಿಖಾಧಿಕಾರಿಗಳು ಕೈಗೊಂಡ ತನಿಖೆಯ ಆಸಕ್ತಿಕರ ಮಾಹಿತಿಗಳು ದಾಖಲಾಗಿವೆ.

ತೀರ್ಪಿನ ಪ್ರಮುಖ ವಿವರ

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) 1967ರ ಸೆಕ್ಷನ್ 16, ಸ್ಫೋಟಕ ವಸ್ತುಗಳ ಕಾಯಿದೆ 1908ರ ಸೆಕ್ಷನ್ 4ರ ಅಡಿ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಬಿ ಆರ್‌ ಪಲ್ಲವಿ ಆದೇಶ ನೀಡಿದ್ದಾರೆ. ಯುಎಪಿಎ ಅಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ ರೂ. 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಲಾಗಿದೆ. ಜೊತೆಗೆ ಸ್ಫೋಟಕ ವಸ್ತುಗಳ ಕಾಯಿದೆಯದಡಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ 10 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಎರಡೂ ಶಿಕ್ಷೆಗಳು ಏಕಕಾಲದಲ್ಲಿಯೇ ಜಾರಿಯಾಗಲಿರುವುದರಿಂದ ದೋಷಿಯು 20 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾನೆ. ಆರೋಪಿಯು ತನಿಖೆ ಹಾಗೂ ಪ್ರಕರಣದ ವಿಚಾರಣೆ ವೇಳೆ ಬಂಧನದಲ್ಲಿದ್ದ ಅವಧಿಯನ್ನು ಕಳೆದು ಉಳಿದ ಶಿಕ್ಷೆಯು ಜಾರಿಯಾಗಲಿದೆ.

2020ರ ಜನವರಿ 20ರಂದು ಘಟನೆ ನಡೆದಿತ್ತು. ಅಂದು ಆರೋಪಿ ಆದಿತ್ಯ ರಾವ್‌ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ. ಇದು ದೇಶದಾದ್ಯಂತ ಸುದ್ದಿ ಮಾಡಿತ್ತು. ಹಲವು ಬಗೆಯ ಅನುಮಾನಗಳು ವ್ಯಕ್ತವಾಗಿದ್ದವು. ಎರಡು ದಿನಗಳ ಬಳಿಕ ಆರೋಪಿಯು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ.

ದೋಷಿಯ ಹಿನ್ನೆಲೆ

ಉಡುಪಿಯ ಮಣಿಪಾಲದವನಾದ ಆದಿತ್ಯರಾವ್‌ ಎಂಜಿನಿಯರಿಂಗ್‌ ಪದವಿ ಪಡೆದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳಿಲ್ಲದೆ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತ ವಾದ ಬಗ್ಗೆ ರಾವ್‌ಗೆ ಆಕ್ರೋಶ ಇತ್ತು. ತನ್ನ ವಿದ್ಯಾಭ್ಯಾಸಕ್ಕೆ ಅನುಗುಣವಾದ ನೌಕರಿ ದೊರೆತಿಲ್ಲ ಎಂಬ ಬೇಸರ ಆತನಲ್ಲಿತ್ತು. ಹೀಗಾಗಿ ಅನೇಕ ಬಾರಿ ಹುಸಿ ಬಾಂಬ್‌ ಕರೆಗಳನ್ನು ಮಾಡಿದ್ದ. ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ.

ಜಸ್ಟ್‌ ಡಯಲ್‌, ಅಮೆಜಾನ್‌ಗಳನ್ನು ವಿಫುಲವಾಗಿ ಬಳಸಿದ್ದ ದೋಷಿ

ಅಂತರ್ಜಾಲ ಬಳಸಿ ಬಾಂಬ್‌ ತಯಾರಿ ಬಗ್ಗೆ ಅಭ್ಯಾಸ ಮಾಡುತ್ತಿದ್ದ ಆರೋಪ ಆದಿತ್ಯನ ಮೇಲಿತ್ತು. ಜಸ್ಟ್‌ ಡಯಲ್‌ ಮೂಲಕ ಬಾಂಬ್‌ ತಯಾರಿಕೆಗೆ ಬೇಕಾದ ಪೊಟಾಷಿಯಂ ಸಲ್ಫೇಟ್‌, ಸಲ್ಫರ್‌ನಂತಹ ರಾಸಾಯನಿಕಗಳು ವಸ್ತುಗಳು ಎಲ್ಲಿ ದೊರೆಯುತ್ತವೆ ಎನ್ನುವ ಮಾಹಿತಿಯನ್ನು ದೋಷಿಯು ಪಡೆದಿದ್ದ. ಅದೇ ರೀತಿ ಅಮೆಜಾನ್‌ ಬಳಸಿ ಬಾಂಬ್‌ ತಯಾರಿಕೆಗೆ ಬೇಕಾದ ಹಲವು ವಸ್ತುಗಳನ್ನು ಖರಿದೀಸಿದ್ದ. ಜಸ್ಟ್‌ ಡಯಲ್‌ನಲ್ಲಿ ಆರೋಪಿಯು ಕೋರಿದ್ದ ಮಾಹಿತಿಯ ಧ್ವನಿ ಮುದ್ರಣವನ್ನು ಸಹ ಸಾಕ್ಷ್ಯವಾಗಿ ನೀಡಲಾಗಿತ್ತು. ಜಸ್ಟ್‌ ಡಯಲ್‌ನ ಅಧಿಕಾರಿ ಹಾಗೂ ಅಮೆಜಾನ್‌ನ ಡೆಲಿವರಿ ಬಾಯ್‌ಗಳು ಸಹ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದರು.

ಮಂಗಳೂರು ಏರ್‌ಪೋರ್ಟ್‌ನ ಪ್ರವೇಶ ದ್ವಾರದ ಬಳಿ ದೋಷಿಯು 2020ರ ಜನವರಿ 20ರಂದು ಬಾಂಬ್ ಇದ್ದ ಬ್ಯಾಗನ್ನಿರಿಸಿದ್ದ. ಶ್ವಾನದಳದಿಂದ ನಡೆದ ತಪಾಸಣೆ ವೇಳೆ ಬಾಂಬ್‌ ಇರುವ ಬ್ಯಾಗ್‌ ದೊರೆತಿತ್ತು. ಕಡೆಗೆ ಬಳಿಕ ಬಾಂಬ್ ನಿಷ್ಕ್ರಿಯ ದಳ ಮೂಲಕ ಕೆಂಜಾರಿನ ವಿಶಾಲವಾದ ಗದ್ದೆಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಿತ್ತು.

ಅನ್ವರ್‌ ಅಲಿ ಮತ್ತಿತರರು ಹಾಗೂ ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಕೂಡ 80 ಪುಟದ ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಪ್ರಕರಣವನ್ನು ಪ್ರಾಸಿಕ್ಯೂಷನ್‌ ಮುನ್ನಡೆಸಿರುವ ಬಗೆಯನ್ನು ಶ್ಲಾಘಿಸಿರುವ ನ್ಯಾಯಾಲಯ ಆರಂಭಿಕ ಹಂತದಲ್ಲಿಯೇ ಆರೋಪಿ ತಪ್ಪಿತಸ್ಥ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಶ್ರಮಿಸಬೇಕಿತ್ತು ಎಂದೂ ಹೇಳಿದೆ.

ತೀರ್ಪಿನ ಪ್ರತಿ ಇಲ್ಲಿದೆ:

Karnataka State Versus Aditya Rao.pdf
Preview