Love 
ಸುದ್ದಿಗಳು

ಹದಿಹರೆಯದವರು ಕಾನೂನಿನ ಭಯವಿಲ್ಲದೆ ಮುಕ್ತವಾಗಿ ಪ್ರಣಯ ಸಂಬಂಧ ಬೆಳೆಸುವಂತಿರಬೇಕು: ದೆಹಲಿ ಹೈಕೋರ್ಟ್

ಹದಿಹರೆಯದ ಅಂತಿಮ ವರ್ಷಗಳಲ್ಲಿರುವವರು ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದರೂ ಅದು ಪೋಕ್ಸೊ ಕಾಯಿದೆಯಡಿ ಅಪರಾಧವೆಂದು ಪರಿಗಣಿತವಾಗುವುದನ್ನು ನ್ಯಾಯಾಲಯ ಟೀಕಿಸಿತು.

Bar & Bench

ಹದಿಹರೆಯದವರು ಹದಿನೆಂಟು ವರ್ಷಕ್ಕಿಂತ (ಸಮ್ಮತಿಯ ವಯಸ್ಸು) ತುಸು ಕಡಿಮೆ ವಯೋಮಾನದವರಾಗಿದ್ದರೂ ಸಹ ಕಾನೂನಿನ ಭಯವಿಲ್ಲದೆ, ಸಹಮತದ, ಪ್ರಣಯ ಸಂಬಂಧಗಳನ್ನು ಹೊಂದುವಂತಹ ಸ್ವಾತಂತ್ರ್ಯ ಹೊಂದಿರಬೇಕು ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಹದಿನೆಂಟಕ್ಕಿಂತ ತುಸುವೇ ಕಡಿಮೆ ವಯೋಮಾನದ ಸಹಮತದ ಸಂಬಂಧಗಳನ್ನು ಅತ್ಯಾಚಾರದ ವಿರುದ್ಧದ ಕಾಯಿದೆಗಳು (ಪೋಕ್ಸೋ) ಅಪರಾಧವೆಂದು ಪರಿಗಣಿಸಬಹುದೆಂಬ ಭಯವಿಲ್ಲದೆ ಅಂತಹ ಪ್ರಣಯ ಸಂಬಂಧಗಳನ್ನು ಹೊಂದುವ ಸ್ವಾತಂತ್ರ್ಯ ಹದಿಹರೆಯದವರಿಗೆ ಇರಬೇಕು ಎಂದು ಅದು ಹೇಳಿದೆ.

ಹದಿಹರೆಯದ ಅಂತಿಮ ವರ್ಷಗಳಲ್ಲಿರುವವರು ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದರೂ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ- 2012ರ (ಪೋಕ್ಸೊ ಕಾಯಿದೆ) ಅಡಿ ಅಪರಾಧವೆಂದು ಪರಿಗಣಿತವಾಗುತ್ತಿದೆ ಎಂದು ನ್ಯಾಯಮೂರ್ತಿ ಜಸ್‌ಪ್ರೀತ್‌ ಸಿಂಗ್ ಅವರಿದ್ದ ಪೀಠ ಗಂಭೀರವಾಗಿ ವಿಮರ್ಶಿಸಿತು.  

ಹದಿಹರೆಯದ ಪ್ರೀತಿಯನ್ನು ಒಪ್ಪಿಕೊಳ್ಳುವಂತಹ ಕಾಯಿದೆ ವಿಕಸನಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. "ಹದಿಹರೆಯದವರ ಪ್ರೀತಿಯ ಬಗ್ಗೆ ಸಾಮಾಜಿಕ ಮತ್ತು ಕಾನೂನು ದೃಷ್ಟಿಕೋನಗಳು ಶೋಷಣೆ ಮತ್ತು ನಿಂದನೆಯಿಂದ ಮುಕ್ತವಾದ ಪ್ರಣಯ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವ ಯುವಜನರ ಹಕ್ಕುಗಳನ್ನು ಒತ್ತಿಹೇಳಬೇಕು ಎಂದು ನಾನು ನಂಬುತ್ತೇನೆ. ಪ್ರೀತಿ ಎಂಬುದು ಮೂಲಭೂತ ಮಾನವ ಅನುಭವವಾಗಿದ್ದು  ಹದಿಹರೆಯದವರು ಭಾವನಾತ್ಮಕ ಸಂಪರ್ಕ ರೂಪಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಈ ಸಂಬಂಧಗಳು ಒಮ್ಮತದಿಂದ ಮತ್ತು ಬಲವಂತದಿಂದ ಮುಕ್ತವಾಗಿರುವವರೆಗೆ, ಅವುಗಳನ್ನು ಒಪ್ಪಿಕೊಳ್ಳಲು ಮತ್ತು ಗೌರವಿಸಲು ಕಾನೂನು ವಿಕಸನಗೊಳ್ಳಬೇಕು" ಎಂದು ಅವರು ಹೇಳಿದರು.

ಪ್ರೀತಿಯು ಮಾನವನ ಮೂಲಭೂತ ಅನುಭವವಾಗಿದ್ದು, ಹದಿಹರೆಯದವರಿಗೆ ಭಾವನಾತ್ಮಕ ಸಂಬಂಧಗಳನ್ನು ರೂಪಿಸಿಕೊಳ್ಳುವ ಹಕ್ಕಿದೆ. ಎಲ್ಲಿಯವರೆಗೆ ಈ ಸಂಬಂಧಗಳು ಪರಸ್ಪರ ಸಹಮತದಿಂದ ಕೂಡಿರುತ್ತವೆಯೋ ಅಲ್ಲಿಯವರೆಗೆ ಕಾನೂನು ಅಂತಹ ಸಂಬಂಧಗಳನ್ನು ಗೌರವಿಸಬೇಕು.
ದೆಹಲಿ ಹೈಕೋರ್ಟ್

2014ರ ಡಿಸೆಂಬರ್‌ನಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಟ್ಯೂಷನ್ ತರಗತಿಗೆ ತೆರಳಿ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಳು ಎಂದು ಆಕೆಯ ತಂದೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಅಂತೆಯೇ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಅಪ್ರಾಪ್ತ ವಯಸ್ಕರನ್ನು ರಕ್ಷಿಸಲು ಕಾನೂನುಬದ್ಧ ಒಪ್ಪಿಗೆಯ ವಯಸ್ಸು ನಿರ್ಣಾಯಕವಾಗಿದ್ದರೂ, ಸಮ್ಮತಿಯ ಸಂಬಂಧಗಳನ್ನು ಕಾನೂನು ಅಪರಾಧೀಕರಿಸುವ ಬದಲು ಶೋಷಣೆ ಮತ್ತು ನಿಂದನೆಯನ್ನು ತಡೆಗಟ್ಟುವತ್ತ ಹೆಚ್ಚು ಗಮನಹರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಗಮನಾರ್ಹವಾಗಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ಕಲ್ಕತ್ತಾ, ಮದ್ರಾಸ್‌, ಆಂಧ್ರ ಪ್ರದೇಶ ಹೈಕೋರ್ಟ್‌ಗಳು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದವು.

ಕರ್ನಾಟಕ ಹೈಕೋರ್ಟ್ ಫೆಬ್ರವರಿ 2024ರಲ್ಲಿ ಪೋಕ್ಸೊ ಕಾಯಿದೆ ಹದಿಹರೆಯದವರ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧಗಳನ್ನು ಅಪರಾಧೀಕರಿಸುವ ಉದ್ದೇಶ ಹೊಂದಿಲ್ಲ, ಬದಲಿಗೆ ಅವರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಗುರಿ ಇರಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟಿತ್ತು.