Bombay High Court  
ಸುದ್ದಿಗಳು

ದತ್ತು ಮಗುವಿಗೆ ದತ್ತು ಪಡೆದ ಪೋಷಕರ ಜಾತಿಯೇ ಅನ್ವಯ: ಬಾಂಬೆ ಹೈಕೋರ್ಟ್

ದತ್ತು ಸ್ವೀಕಾರ ಮಾಡಲಾದ ಪರಿತ್ಯಕ್ತ ಮಗು ಬಾಲ ನ್ಯಾಯ ಕಾಯಿದೆಯಡಿ ದತ್ತು ಪಡೆದ ಪೋಷಕರ ಪೂರ್ಣ ಕಾನೂನುಬದ್ಧ ಉತ್ತರಾಧಿಕಾರಿಯಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ದತ್ತು ಮಗುವಿಗೆ ದತ್ತು ಪಡೆದ ಕುಟುಂಬದ ಜಾತಿಯೆಏ ಅನ್ವಯವಾಗುತ್ತದೆ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ ಈ ಮಾನ್ಯತೆ ನಿರಾಕರಿಸಿದರೆ ಮಗುವಿನ ಭವಿಷ್ಯ ಡೋಲಾಯಮಾನವಾಗುತ್ತದೆ ಎಂದು ಹೇಳಿದೆ [ದತ್ತು ಸ್ವೀಕಾರ ಮಾಡಿದ ತಾಯಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಬಾಲ ನ್ಯಾಯ ಕಾಯಿದೆಯಡಿ ದತ್ತಕ ಪ್ರಕ್ರಿಯೆ ಪೂರ್ಣಗೊಂಡ ಕ್ಷಣದಿಂದಲೇ ಮಗು ದತ್ತು ಪೋಷಕರ ಕಾನೂನುಬದ್ಧ ಮಗು ಎನಿಸಿಕೊಳ್ಳಲಿದ್ದು ಈ ಸಂಬಂಧ ಕುರಿತಾದ  ಎಲ್ಲಾ ಹಕ್ಕು ಸವಲತ್ತು ಹಾಗೂ ಕರ್ತವ್ಯಗಳು ಮಗುವಿಗೆ ಅನ್ವಯವಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಎಂ.ಎಸ್. ಕಾರ್ಣಿಕ್ ಮತ್ತು ಎಸ್.ಎಂ. ಮೋದಕ್ ಅವರನ್ನೊಳಗೊಂಡ ವಿಭಾಗೀಯ ಪೀಠ‌ ತಿಳಿಸಿದೆ.

“ದತ್ತು ಪಡೆದ ಮಗುವಿಗೆ ದತ್ತು ಪೋಷಕರ ಮಗುವೆಂಬ ಕಾನೂನು ಸ್ಥಾನಮಾನ ನೀಡಲೇಬೇಕು. ಅರ್ಜಿದಾರರ ದತ್ತು ಪೋಷಕರು ವಿಶೇಷ ಹಿಂದುಳಿದ ವರ್ಗಕ್ಕೆ ಸೇರಿದವರು. ಆದ್ದರಿಂದ ದತ್ತು ಪಡೆದ ಮಗುವಿಗೂ ಅದೇ ಸ್ಥಾನಮಾನ ನೀಡಬೇಕು” ಎಂದು ಪೀಠ ಹೇಳಿದೆ.

ದತ್ತು ಪಡೆದ ಮಗುವಿಗೆ ಮೊದಲು ತನ್ನ ತಾಯಿಯ ಜಾತಿ ಆಧರಿಸಿ ವಿಶೇಷ ಹಿಂದುಳಿದ ವರ್ಗದ ಜಾತಿ ಪ್ರಮಾಣಪತ್ರ ನೀಡಿ ನಂತರ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ದತ್ತು ಪಡೆದ ತಾಯಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಜನನದ ವೇಳೆಯೇ ಪರಿತ್ಯಕ್ತವಾಗಿದ್ದ ಮಗುವನ್ನು ಅವರು ಬಾಲ ನ್ಯಾಯ ಕಾಯಿದೆ 2000ರ ಅಡಿಯಲ್ಲಿ ಪುಣೆಯ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ಆದೇಶದಂತೆ ದತ್ತು ಪಡೆದಿದ್ದರು.

ದತ್ತು ತಾಯಿಯ ವಿಶೇಷ ಹಿಂದುಳಿದ ವರ್ಗ ಸ್ಥಾನಮಾನ ಆಧರಿಸಿ ಮಗುವಿಗೆ ಜಾತಿ ಪ್ರಮಾಣಪತ್ರ ನೀಡಲಾಗಿತ್ತು. ಆದರೆ ನಂತರ ಬರೆಯಲಾದ ಮೂಗರ್ಜಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ರದ್ದುಪಡಿಸಿದ್ದರು. ಇದನ್ನು ಪ್ರಶ್ನಿಸಿ ದತ್ತು ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ದತ್ತು ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡುವ ಕುರಿತು ವಿಶೇಷ ವ್ಯವಸ್ಥೆ ಇಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತ್ತು.

ಆದರೆ ಬಾಲ ನ್ಯಾಯ ಕಾಯಿದೆಯನ್ನು ಆಧರಿಸಿದ ನ್ಯಾಯಾಲಯ ದತ್ತು ಪಡೆದ ಬಳಿಕ ಮಗುವಿನ ಜೈವಿಕ ಕುಟುಂಬದ ನಂಟು ಸಂಪೂರ್ಣ ಕಡಿದುಹೋಗಿ ದತ್ತು ಕುಟುಂಬದೊಂದಿಗೆ ಶಾಶ್ವತ ಸಂಬಂಧ ರೂಪುಗೊಳ್ಳುತ್ತದೆ ಎಂದು ಹೇಳಿದೆ.

ದತ್ತು ಪಡೆದ ಮಗುವಿಗೆ ಈ ಹಕ್ಕು ನಿರಾಕರಿಸಿದರೆ ಅದರ ಭವಿಷ್ಯ ಅನಿಶ್ಚಿತತೆಗೆ ಸಿಲುಕುತ್ತದೆ ಎಂದ ಅದು ಇನ್ನು ನಾಲ್ಕು ವಾರಗಳ ಒಳಗಾಗಿ ಮಗುವಿಗೆ ವಿಶೇಷ ಹಿಂದುಳಿದ ವರ್ಗದ ಸದಸ್ಯನಾಗಿ ಜಾತಿ ಪ್ರಮಾಣಪತ್ರ ನೀಡುವಂತೆ ನಿರ್ದೇಶಿಸಿತು.

[ಆದೇಶದ ಪ್ರತಿ]

Adoptive_mother_v__State_of_Maharashtra___Ors_.pdf
Preview