AAB Protest 
ಸುದ್ದಿಗಳು

ನ್ಯಾಯಾಲಯಗಳಲ್ಲಿ ಆಡಳಿತ ಸಂಪೂರ್ಣ ಕುಸಿತ: ಬೆಂಗಳೂರು ವಕೀಲರ ಸಂಘದಿಂದ ಧರಣಿ

“ಕೆಲವು ಕೋರ್ಟ್‌ಗಳಲ್ಲಿ ವಕೀಲರು ಸಲ್ಲಿಸುವ ಮೆಮೊ ಸ್ವೀಕಾರ ಮಾಡುತ್ತಿಲ್ಲ, ಪೋಸ್ಟಿಂಗ್‌ ಆಗುತ್ತಿಲ್ಲ, ಕೆಲವು ನ್ಯಾಯಾಧೀಶರು ನಮ್ಮ ಮುಖಕ್ಕೆ ಅರ್ಜಿ ಎಸೆಯುತ್ತಾರೆ” ಎಂದು ಆಪಾದಿಸಿದ ವಕೀಲರು.

Bar & Bench

“ಹೈಕೋರ್ಟ್‌ ಸೇರಿದಂತೆ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು ಮುಖ್ಯ ನ್ಯಾಯಮೂರ್ತಿಗಳು (ಸಿಜೆ) ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಬೆಂಗಳೂರು ವಕೀಲರ ಸಂಘ ಬುಧವಾರ ಗಂಭೀರ ಆರೋಪ ಮಾಡಿದೆ.

ನಿರಂತರ ಆಡಳಿತ ವೈಫಲ್ಯ ಹಾಗೂ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಉದಾಸೀನತೆ ತೋರುತ್ತಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಬುಧವಾರ ಬೆಳಿಗ್ಗೆ ಹೈಕೋರ್ಟ್‌ನ ‘ಗೋಲ್ಡನ್ ಜ್ಯುಬಿಲಿ ಗೇಟ್’ ಮುಂದೆ ಧರಣಿ ನಡೆಸಿತು.

ಧರಣಿಯಲ್ಲಿ ಭಾಗವಹಿಸಿದ್ದ ಸಂಘದ ಮಾಜಿ ಅಧ್ಯಕ್ಷ ಡಿ ಎಲ್ ಜಗದೀಶ್‌, ಎಂ ಟಿ ನಾಣಯ್ಯ, ಎ ಎನ್‌ ಗಂಗಾಧರಯ್ಯ, ಎಸ್ ಬಸವರಾಜ್‌, ರಾಜ್ಯ ವಕೀಲರ ಪರಿಷತ್‌ ಸದಸ್ಯರುಗಳಾದ ಎಸ್ ಹರೀಶ್‌, ಗೌತಮ್ ಚಂದ್‌, ರಾಜಣ್ಣ, ಸಂಘದ ಮಾಜಿ ಖಜಾಂಚಿ ಎಚ್‌ಎಂಟಿ ರವಿ, ಎಚ್‌ ಆರ್ ಅನಿತಾ, ಯು ಸಂಧ್ಯಾಪ್ರಭು ಇತರರು ಮಾತನಾಡಿದರು.

“ವಕೀಲರ ನೋವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ನೋವುಂಡ ಕಕ್ಷಿದಾರರ ಕೊನೆಯ ಆಸರೆಯ ತಾಣದಲ್ಲಿ ಇಂದು ಹೊಣೆಗಾರಿಕೆ ಇಲ್ಲವಾಗಿದೆ. ಹೊರ ರಾಜ್ಯದ ನ್ಯಾಯಮೂರ್ತಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಮುಖ್ಯ ನ್ಯಾಯಮೂರ್ತಿಗಳು ಕೂಡಲೇ ಇತ್ತ ಗಮನ ಹರಿಸಬೇಕು” ಎಂದು ಆಗ್ರಹಿಸಿದರು.

“ಕೆಲವು ಕೋರ್ಟ್‌ಗಳಲ್ಲಿ ವಕೀಲರು ಸಲ್ಲಿಸುವ ಮೆಮೊ ಸ್ವೀಕಾರ ಮಾಡುತ್ತಿಲ್ಲ, ಪೋಸ್ಟಿಂಗ್‌ ಆಗುತ್ತಿಲ್ಲ, ಕೆಲವು ನ್ಯಾಯಾಧೀಶರು ನಮ್ಮ ಮುಖಕ್ಕೆ ಅರ್ಜಿ ಎಸೆಯುತ್ತಾರೆ. ಬೆಂಚ್‌ ಕ್ಲರ್ಕ್‌ಗಳು ಮತ್ತು ಕೋರ್ಟ್ ಆಫೀಸರ್‌ಗಳೇ ಕೋರ್ಟ್‌ ಪಾರುಪತ್ಯ ವಹಿಸಿಕೊಂಡು ಹೋಗುತ್ತಿರುವ ದುಃಸ್ಥಿತಿ ಕಾಣುತ್ತಿದ್ದೇವೆ. ದಾವೆ ಪರಿಶೀಲನಾ ವಿಭಾಗಗಳಲ್ಲಿ ದಡ್ಡರು ಅರ್ಜಿ ಪರಿಶೀಲನೆ ಮಾಡುತ್ತಿದ್ದು ಇಂತಹ ವಿಭಾಗಗಳಲ್ಲಿ ಕಾನೂನು ಪದವಿ ಪಡೆದವರನ್ನು ನಿಯುಕ್ತಿಗೊಳಿಸಬೇಕು” ಎಂದು ಮನವಿ ಮಾಡಿದರು.

“ಸಿಟಿ ಸಿವಿಲ್ ಕೋರ್ಟ್‌, ಮ್ಯಾಜಿಸ್ಟ್ರೇಟ್ ಮತ್ತು ಮೇಯೊ ಹಾಲ್ ಕೋರ್ಟ್‌ಗಳ ಮೂಲ ಸೌಕರ್ಯಕ್ಕೆ ಸಂಘ ನೀಡುತ್ತಿರುವ ಕೊಡುಗೆ ಸಾಕಷ್ಟಿದ್ದರೂ ನ್ಯಾಯಾಂಗದ ವತಿಯಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಇದರಿಂದ ವಕೀಲರು, ಕಕ್ಷಿದಾರರು ನರಳುವಂತಾಗಿದೆ. ಎಲ್ಲಾ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ತಾವೂ ವಕೀಲ ವೃಂದದಿಂದಲೇ ಆ ಸ್ಥಾನಗಳನ್ನು ತಲುಪಿದ್ದೇವೆ ಎಂಬುದನ್ನು ಮರೆಯಬಾರದು. ವಕೀಲ ವೃಂದದ ಕೋಪಕ್ಕೆ ತುತ್ತಾಗಬಾರದು” ಎಂದು ಎಚ್ಚರಿಸಿದರು.

ಸಂಘದ ಮಾಜಿ ಅಧ್ಯಕ್ಷ ಕೆ ಎನ್ ಸುಬ್ಬಾರೆಡ್ಡಿ, ಸಂಘದ ಉಪಾಧ್ಯಕ್ಷ ಸಿ ಎಸ್ ಗಿರೀಶ್‌ ಕುಮಾರ್, ಪದಾಧಿಕಾರಿಗಳಾದ ಎಂ ಚಾಮರಾಜ, ಎಸ್‌ ರಾಜು, ಆತ್ಮ ವಿ ಹಿರೇಮಠ, ಎಚ್‌ ಎನ್‌ ತಮ್ಮಯ್ಯ, ಖಜಾಂಚಿ ಶ್ವೇತಾ ರವಿಶಂಕರ್, ಅರವಿಂದ ಕಾಮತ್‌ ಸೇರಿದಂತೆ ನಾಲ್ಕೂ ವಿಭಾಗಗಳ ಪದಾಧಿಕಾರಿಗಳು ಇದ್ದರು.  

ಪುರುಷರು–ಮಹಿಳೆಯರಿಗೆ ಒಂದೇ ಶೌಚಾಲಯ!

“ಅಧೀನ ನ್ಯಾಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಶೌಚಾಲಯ ಬಳಕೆಯಾಗುತ್ತಿದೆ. ಪುರುಷರು ಹೊರಬಂದ ನಂತರ ಮಹಿಳೆಯರು ಶೌಚಾಲಯಕ್ಕೆ ಹೋಗಿ ಬರಬೇಕಾದ ಅವಸ್ಥೆಯಲ್ಲಿ ವಕೀಲರು ಕೆಲಸ ಮಾಡುತ್ತಿದ್ದಾರೆ” ಎಂದು ಕೆಲವು ಮಹಿಳಾ ವಕೀಲರು ದೂರಿದರು.

ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಂದ ವಕೀಲರು ರೋಸಿ ಹೋಗಿದ್ದಾರೆ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾದವರು ಬೇಜವಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಕೆಲವು ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ವಕೀಲರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಇಂದಿನ ಧರಣಿ ಕೇವಲ ಸಾಂಕೇತಿಕ. ಕೂಡಲೇ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಹೋದಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಚಿಂತಿಸಬೇಕಾಗುತ್ತದೆ” ಎಂದು ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್‌ ಗೌಡ ಹೇಳಿದರು.