Lawyers
Lawyers 
ಸುದ್ದಿಗಳು

ನಿಂದನಾ ಅಧಿಕಾರವನ್ನು ಅಸ್ತ್ರದ ರೀತಿ ಬಳಸಬಾರದು: ವಕೀಲರ ಸಂಘಗಳ ವಿರುದ್ಧದ ನಿಂದನಾ ಪ್ರಕ್ರಿಯೆ ಹಿಂಪಡೆಯಲು ಎಎಬಿ ಮನವಿ

Bar & Bench

ನ್ಯಾಯಾಲಯದ ಕಲಾಪಕ್ಕೆ ಬಹಿಷ್ಕಾರ ಹಾಕಿದ್ದ ರಾಜ್ಯದ ಏಳು ವಕೀಲರ ಸಂಘಗಳು ಮತ್ತು ಅವುಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವ ಕರ್ನಾಟಕ ಹೈಕೋರ್ಟ್‌ ತೀರ್ಮಾನಕ್ಕೆ ಬೆಂಗಳೂರಿನ ವಕೀಲರ ಸಂಘವು (ಎಎಬಿ) ಪ್ರತಿಭಟನೆ ಮತ್ತು ಅಸಮ್ಮತಿ ದಾಖಲಿಸಿದೆ.

ನ್ಯಾಯಾಂಗದ ಆಕ್ರಮಣಶೀಲತೆಯು ಸಂಸ್ಥೆಗೆ ಒಳಿತು ಮಾಡುವುದಿಲ್ಲ ಎಂದಿರುವ ವಕೀಲರ ಸಂಘವು ನ್ಯಾಯಾಂಗ ನಿಂದನಾ ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದೆ.

“ನ್ಯಾಯಾಂಗ ನಿಂದನಾ ಪ್ರಕ್ರಿಯೆಂಥ ತೀರ ಅಸಹಜವಾದ ನಿರ್ಧಾರಕ್ಕೆ ನಮ್ಮ ತೀವ್ರ ವಿರೋಧ ಮತ್ತು ಅಸಮ್ಮತಿ ದಾಖಲಿಸುತ್ತಿದ್ದೇವೆ. ಪ್ರಸಕ್ತ ವಿಷಯದಲ್ಲಿ ನೀವು ಆಡಳಿತಾತ್ಮಕವಾಗಿ ಮತ್ತು ನ್ಯಾಯಿಕವಾಗಿ ಉಭಯ ರೀತಿಯಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸದೆ ಇರಲಾಗದು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಯಾವುದೇ ರೀತಿಯಲ್ಲಿಯೂ ಸಮಸ್ಯೆಗೆ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಉತ್ತರ ಅಥವಾ ಪರಿಹಾರವಲ್ಲ.
ಸಿಜೆ ಅಭಯ್‌ ಓಕಾಗೆ ಎಎಬಿ ಬರೆದ ಪತ್ರ

“ನ್ಯಾಯಾಂಗ ನಿಂದನಾ ಕ್ರಮವು ಸಮಸ್ಯೆಗೆ ಪರಿಹಾರ ಅಥವಾ ಉತ್ತರವಾಗುವುದಿಲ್ಲ. ನ್ಯಾಯಾಂಗ ನಿಂದನಾ ಪ್ರಕ್ರಿಯೆಯನ್ನು ಕತ್ತಿ ಅಥವಾ ಅಸ್ತ್ರವಾಗಿ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್‌ ಮೇಲಿಂದ ಮೇಲೆ ಹೇಳಿದೆ” ಎಂದು ಎಎಬಿ ಪತ್ರದಲ್ಲಿ ವಿವರಿಸಿದೆ.

“ಒಂದು ಚಕ್ರದ ಮೇಲೆ ದಾಳಿ ಮಾಡುವುದರಿಂದ ಅಥವಾ ಅದನ್ನು ಕತ್ತರಿಸುವುದರಿಂದ ಎರಡು ಚಕ್ರಗಳ ನಡುವೆ ಸಮನ್ವಯತೆ ಸಾಧಿಸಲಾಗುವುದಿಲ್ಲ. ಎರಡೂ ಚಕ್ರಗಳನ್ನು ಘನತೆಯಿಂದ ನೋಡುವುದರಿಂದ ಅವುಗಳ ಬಗ್ಗೆ ಕಾಳಜಿ ವಹಿಸುವುದರಿಂಧ ಸಮನ್ವಯತೆ ಸಾಧಿಸಬಹುದು” ಎಂದು ಎಎಬಿ ಉಲ್ಲೇಖಿಸಿದ್ದು, ವಕೀಲರ ಸಂಘಗಳ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಕೋರಿದೆ.