Madras High Court campus, Chennai
Madras High Court campus, Chennai 
ಸುದ್ದಿಗಳು

ಕ್ರಿಮಿನಲ್ ಚಟುವಟಿಕೆಗಳಿಗೆ ದುರ್ಬಳಕೆಯಾಗುತ್ತಿದ್ದರೆ ವಕೀಲರ ಸ್ಟಿಕರ್‌ ಏಕೆ ನಿಷೇಧಿಸಬಾರದು? - ಮದ್ರಾಸ್ ಹೈಕೋರ್ಟ್

Bar & Bench

ಕಾನೂನು ಚೌಕಟ್ಟಿನಿಂದ ಪಾರಾಗಲು ವಕೀಲರ ಸ್ಟಿಕರ್‌ಗಳನ್ನು ದುರ್ಬಳಕೆ ಮಾಡಲಾಗುತ್ತದೆ ಎಂದಾದರೆ ಅವುಗಳನ್ನು ನಿಷೇಧಿಸಬಹುದೇ ಎಂಬುದರ ಕುರಿತು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಪ್ರತಿಕ್ರಿಯೆ ಬಯಸಿದೆ (ರಮೇಶ್‌ ವರ್ಸಸ್‌ ಡಾ. ಅಂಬೇಡ್ಕರ್‌ ಕಾನೂನು ವಿಶ್ವವಿದ್ಯಾಲಯ ಉಪಕುಲಪತಿ).

ಪೊಲೀಸರಿಂದ ಪಾರಾಗಲು ಕಾನೂನು ವಿದ್ಯಾರ್ಥಿಗಳು ವಕೀಲರ ಸ್ಟಿಕರ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರಮೇಶ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಕಾನೂನು ಬಾಹಿರ ಮತ್ತು ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸಲು ಗೂಂಡಾಗಳು ವಕೀಲರ ಸ್ಟಿಕರ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಪರಿಗಣಿಸಿರುವ ಪೀಠವು ಕ್ರಿಮಿನಲ್‌ ಚಟುವಟಿಕೆ ನಡೆಸಲು ವಕೀಲರ ಸ್ಟಿಕರ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅವುಗಳನ್ನು ನಿಷೇಧಿಸಬೇಕೆ ಎಂದು ಕೇಳಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಪೀಠದ ಪ್ರಶ್ನೆಗಳು ಇಂತಿವೆ:

  • ವಕೀಲರ ಸ್ಟಿಕರ್‌ಗಳು ಕಾನೂನುಬದ್ಧವಾಗಿ ಅಧಿಕೃತವಾಗಿದೆಯೇ ಮತ್ತು ಅದಕ್ಕೆ ಕಾನೂನು ಅನುಮತಿ ದೊರೆತಿದೆಯೇ?

  • ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ವಾಹನಗಳಿಗೆ ವಕೀಲರ ಸ್ಟಿಕರ್‌ಗಳನ್ನು ಹಾಕಿಕೊಂಡು, ಪೊಲೀಸರನ್ನು ಬೆದರಿಸಿ ಮತ್ತು ಕಾನೂನು ಚೌಕಟ್ಟಿನಿಂದ ಪಾರಾಗಲು ಯತ್ನಿಸುವುದರಿಂದ ಅವುಗಳನ್ನೇಕೆ ನಿಷೇಧಿಸಬಾರದು?

ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ರಾಜ್ಯ ಸರ್ಕಾರ, ಪೊಲೀಸ್‌ ಮಹಾನಿರ್ದೇಶಕರು, ಭಾರತೀಯ ವಕೀಲರ ಪರಿಷತ್‌, ತಮಿಳುನಾಡು ವಕೀಲರ ಪರಿಷತ್‌, ಪುದುಚೆರಿ ವಕೀಲರ ಒಕ್ಕೂಟ, ಮದ್ರಾಸ್‌ ವಕೀಲರ ಪರಿಷತ್‌, ಮದ್ರಾಸ್‌ ಹೈಕೋರ್ಟ್‌ ವಕೀಲರ ಪರಿಷತ್‌, ಮಹಿಳಾ ವಕೀಲರ ಸಂಘ, ಮದುರೈ ವಕೀಲರ ಪರಿಷತ್‌ ಮತ್ತು ತಮಿಳುನಾಡಿನ ಇತರೆ ಪ್ರಮುಖ ವಕೀಲರ ಸಂಘಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಿದೆ. ಮಾಸಾಂತ್ಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.