ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರು ವಕೀಲರ ಸಂಘ (ಎಎಬಿ), ತಕ್ಷಣವೇ ಪ್ರಸ್ತಾವನೆ ಹಿಂಪಡೆಯುವಂತೆ ಆಗ್ರಹಿಸಿ ಬೆಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮುರಳೀಧರ ಪೈ ಅವರಿಗೆ ಪತ್ರ ಬರೆದಿದೆ.
ಬೆಂಗಳೂರು ಮತ್ತು ಕರ್ನಾಟಕದ ಇಡೀ ವಕೀಲರ ಬಳಗ ದಿನದ 24 ಗಂಟೆಗಳ ಕಾಲ ವಾರ ಪೂರ್ತಿ ಶ್ರಮಿಸುತ್ತಿದೆ. ವಾರದ ದಿನಗಳಲ್ಲಿ ನ್ಯಾಯಾಲಯದಲ್ಲಿ 16 ಗಂಟೆಗಳ ಕಠಿಣ ಕೆಲಸದ ಜತೆಗೆ, ವಾರಾಂತ್ಯದಲ್ಲೂ ವಕೀಲರ ಕೆಲಸಗಳು ನಿರಂತರವಾಗಿ ಮುಂದುವರಿಯುತ್ತಿರುತ್ತದೆ. ಆ ಸಂದರ್ಭದಲ್ಲಿ ವಕೀಲರು ತಮ್ಮ ಕಕ್ಷಿದಾರರನ್ನು ಭೇಟಿಯಾಗಬೇಕಿರುತ್ತದೆ. ವಕೀಲರಿಗೆ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಕಡಿಮೆ ಅವಕಾಶವಿದೆ. ಇಂಥ ಪರಿಸ್ಥಿತಿಯಲ್ಲಿ ವಕೀಲರು ಸಂಜೆ ನ್ಯಾಯಾಲಯಗಳಿಗೆ ಸಮಯ ನೀಡುತ್ತಾರೆಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದು ವಕೀಲರ ಸಂಘದ ಪತ್ರದಲ್ಲಿ ಹೇಳಲಾಗಿದೆ.
ಸಂಜೆ ವಕೀಲರ ಕಚೇರಿ ಸಮಯವು ನ್ಯಾಯಾಲಯದ ಸಮಯದಷ್ಟೇ ಮುಖ್ಯವಾಗಿದೆ. ಪ್ರತಿದಿನ, ಬೆಳಗ್ಗೆ 9ರಿಂದ ಸಂಜೆ 8ರವರೆಗೆ ಕಚೇರಿ ಮತ್ತು ನ್ಯಾಯಾಲಯಕ್ಕೆ ಹಾಜರಾದ ನಂತರ ವಕೀಲರು ಸಂಜೆ ಮತ್ತೆ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಸಮಯದ ನಂತರ ವಕೀಲರು ಸಂಜೆ ವೇಳೆ ತಮ್ಮ ಕಚೇರಿಯಲ್ಲಿದ್ದು, ಕಕ್ಷಿದಾರರನ್ನು ಭೇಟಿ ಮಾಡಬೇಕಾಗುತ್ತದೆ. ಪ್ರಕರಣಗಳಿಗೆ ತಯಾರಿ ನಡೆಸುವುದು, ಕರಡು ರೂಪಿಸುವುದು ಮತ್ತು ಇತರ ಕೆಲಸಗಳನ್ನು ಕೈಗೊಳ್ಳಬೇಕಿರುತ್ತದೆ. ಸಂಜೆ ನ್ಯಾಯಾಲಯಗಳು ವಕೀಲರ ಈ ಪ್ರಮುಖ ಚಟುವಟಿಕೆಗೆ ತಡೆಯುಂಟು ಮಾಡಲಿದೆ ಎಂದು ಎಎಬಿ ಆಕ್ಷೇಪಿಸಿದೆ.
ವಕೀಲರ ಮೇಲೆ ಈಗಾಗಲೇ ಸಾಕಷ್ಟು ಒತ್ತಡವಿದ್ದು, ಅವರ ಜೀವನ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳಿಗಾಗಿ ಕಾಯುವಿಕೆ ಹಾಗೂ ಕಕ್ಷಿದಾರ, ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಯಿಂದ ಎದುರಾಗುವ ಒತ್ತಡದಿಂದಾಗಿ ವಕೀಲರು ಅಧಿಕ ರಕ್ತದೊತ್ತಡ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಿರುವಾಗ, ವಕೀಲರ ಒತ್ತಡ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬದಲು, ಸಂಜೆ ನ್ಯಾಯಾಲಯಗಳ ಪ್ರಸ್ತಾವನೆಯು ವಕೀಲರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಎಎಬಿ ಬಲವಾದ ವಿರೋಧ ವ್ಯಕ್ತಪಡಿಸುತ್ತಿದೆ. ವಕೀಲರು ಸರ್ವಾನುಮತದಿಂದ ವಿರೋಧಿಸುತ್ತಿರುವುದರಿಂದ ಸಂಜೆ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.