ದೆಹಲಿ ಹಾಗೂ ಬಾಂಬೆ ಹೈಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಈ ಎರಡೂ ಕಡೆ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಂಡವು.
ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ಬಂದ ಕೆಲ ಹೊತ್ತಿನಲ್ಲಿಯೆ ಬಾಂಬೆ ಹೈಕೋರ್ಟ್‌ಗೂ ಇದೇ ರೀತಿಯ ಬೆದರಿಕೆ ಕರೆ ಬಂದಿದ್ದು ಎರಡೂ ಕಡೆ ನ್ಯಾಯಾಲಯ ಕಲಾಪಗಳನ್ನು ದಿಢೀರನೆ ಸ್ಥಗಿತಗೊಳಿಸಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು, ದಾವೆದಾರರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಬಾಂಬೆ ಹೈಕೋರ್ಟ್ ಕಟ್ಟಡದಿಂದ ಹೊರಗೆ ಕಳುಹಿಸಲಾಯಿತು. ಭದ್ರತಾ ಸಿಬ್ಬಂದಿ ಕೂಡಲೇ ಪ್ರದೇಶವನ್ನು ಸುತ್ತುವರೆದರು. ಬಾಂಬ್ ಪತ್ತೆ ದಳ ಕಾರ್ಯೋನ್ಮುಖವಾಯಿತು.
ಶುಕ್ರವಾರ ಬೆಳಿಗ್ಗೆ ದೆಹಲಿ ಹೈಕೋರ್ಟ್‌ನಲ್ಲಿ ಇಂಥದ್ದೇ ಘಟನೆ ನಡೆದು ಹಠಾತ್ತನೆ ನ್ಯಾಯಾಲಯ ಕಲಾಪಗಳು ಸ್ಥಗಿತಗೊಂಡಿದ್ದವು. ಹೈಕೋರ್ಟ್ ಕಟ್ಟಡದೊಳಗೆ ಬಾಂಬ್ ಸ್ಫೋಟಿಸಲಿದೆ ಎಂದು ಪತ್ರ ಬರೆದಿರುವುದನ್ನು ಮೂಲಗಳು ತಿಳಿಸಿದ್ದವು. ಘಟನೆಯಿಂದಾಗಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಬಾಂಬ್ ಪತ್ತೆ ದಳ ಶೋಧ ಕಾರ್ಯಾಚರಣೆ ನಡೆಸಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.