Lokayukta and Karnataka HC
Lokayukta and Karnataka HC 
ಸುದ್ದಿಗಳು

ಬೆಳಗಾವಿ ಎಸ್‌ಟಿಪಿ ನಿರ್ಮಾಣಕ್ಕೆ ₹2 ಕೋಟಿ ವೆಚ್ಚ ಮಾಡಿ ಕಾಮಗಾರಿ ಸ್ಥಳಾಂತರ: ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ಆದೇಶ

Bar & Bench

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ (ಎಸ್‌ಟಿಪಿ) ರಾಜ್ಯ ಸರ್ಕಾರದ ಬೊಕ್ಕಸದಿಂದ 2 ಕೋಟಿ ರೂಪಾಯಿ ವೆಚ್ಚ ಮಾಡಿದ ನಂತರ ಘಟಕವನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಿಸಿ ಕಾಮಗಾರಿ ಕೈಗೊಂಡ ಪ್ರಕರಣದ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಲೋಕಾಯುಕ್ತಕ್ಕೆ ವಹಿಸಿದೆ.

ನಾರಾಯಣ ಬೈರು ಸಾವಂತ್ ಸೇರಿ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕಳೆದ ವಿಚಾರಣೆ ವೇಳೆ ನ್ಯಾಯಾಲಯವು ಎಸ್‌ಟಿಪಿ ನಿರ್ಮಾಣಕ್ಕೆ 2 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ, ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಿರುವ ಬಗ್ಗೆ ವಿವರಣೆ ನೀಡುವಂತೆ ನೀಡಿದ್ದ ನಿರ್ದೇಶನದಂತೆ ಪಾಲಿಕೆ ಆಯುಕ್ತರು ಪ್ರಮಾಣಪತ್ರ ಸಲ್ಲಿಸಿದ್ದರು.

ಇದನ್ನು ಪರಿಶೀಲಿಸಿದ ಪೀಠವು ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹಣ ವೆಚ್ಚ ಮಾಡಿಲ್ಲ ಎಂದು ಹೇಳಲಾಗಿದೆ. ಆದರೆ, ಇತರೆ ದಾಖಲೆಗಳನ್ನು ಪರಿಶೀಲಿಸಿದರೆ ಹಣ ಖರ್ಚಾಗಿರುವುದು ಕಂಡುಬರುತ್ತಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ, ಹಣ ಖರ್ಚಾಗಿದ್ದರೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಯೋಜನೆಯನ್ನು ಯಾವ ಕಾರಣಕ್ಕೆ ಅಲರವಾಡದಿಂದ ಹಲಗೆ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ನೀಡಿ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ನವೆಂಬರ್‌ 25ಕ್ಕೆ ಮುಂದೂಡಿತು.

ಬೆಳಗಾವಿ ನಗರದ ತ್ಯಾಜ್ಯ ನೀರು ಸಂಸ್ಕರಣೆಗಾಗಿ 1993ರಲ್ಲಿ ಅಲರವಾಡದಲ್ಲಿ ಘಟಕ ಸ್ಥಾಪನೆಗೆ ಭೂ ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿಗೆ ಅಂದಾಜು 2 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಆದರೆ, ಅಲ್ಲಿ ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿ, ಬೇರೊಂದು ಪ್ರದೇಶದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಕಳೆದ ವಿಚಾರಣೆ ವೇಳೆ ಹೈಕೋರ್ಟ್, ಕಾಮಗಾರಿಗಾಗಿ 2 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿದ ನಂತರ ಅದನ್ನು ಸ್ಥಗಿತಗೊಳಿಸಿದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ಯಾವ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಯಿತು, ಅದಕ್ಕಾಗಿ ವೆಚ್ಚ ಮಾಡಿರುವ ಸರ್ಕಾರದ ಹಣ ವ್ಯರ್ಥವಾಗಲಿಲ್ಲವೇ, ಸಾರ್ವಜನಿಕರ ಹಣವನ್ನು ಹೀಗೆ ಪೋಲು ಮಾಡುವುದು ಸರಿಯಲ್ಲ, ಘಟಕ ಸ್ಥಾಪನೆಗೂ ಮೊದಲು ಪಾಲಿಕೆ ವಿವೇಚನೆ ಬಳಸಿಲ್ಲವೇ ಎಂದು ಪ್ರಶ್ನಿಸಿ, ಆಯುಕ್ತರಿಂದ ವಿವರಣೆ ಕೇಳಿತ್ತು.

ಪಾಲಿಕೆ ಆಯುಕ್ತರ ಪರವಾಗಿ ವಕೀಲೆ ಸುಮನಾ ಬಾಳಿಗಾ, ಅರ್ಜಿದಾರರ ಪರವಾಗಿ ವಕೀಲ ರವಿಕುಮಾರ್‌ ಗೋಕಾಕಕರ್‌ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.